ನವದೆಹಲಿ: ಲಾಕ್ ಡೌನ್ ಸಡಿಲ ನಂತರ ಕೊರೊನಾ ಸೋಂಕಿತರ ಸಂಖ್ಯೆ ಡಬಲ್ ಆಗುತ್ತಿದೆ. ಬಿಗಿಯಾದ ಲಾಕ್ ಡೌನ್ ಇದ್ದ ಸಂದರ್ಭದಲ್ಲಿ ದಿನವೊಂದಕ್ಕೆ 3 ಸಾವಿರ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು, ಲಾಕ್ ಡೌನ್ ಸಡಿಲ ನಂತರ ಡಬಲ್ ಆಗಿದೆ. ಇಡೀಗ ಪ್ರತಿ ದಿನ 6 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಇಂದು ಒಂದೇ ದಿನ ಬರೋಬ್ಬರಿ 6,088 ಮಂದಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,18,447ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 148 ಮಂದಿ ಸಾವನ್ನಪ್ಪಿದ್ದಾರೆ.ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 3,583 ಮಂದಿ ಬಲಿಯಾಗಿದ್ದಾರೆ. ಒಟ್ಟು 48,533 ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 66,330 ಸೋಂಕಿತರು ಇನ್ನೂ ಕೊರೊನಾದಿಂದ ಬಳಲುತ್ತಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ 1,605 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 41ರಲ್ಲಿಯೇ ಇದೆ. ಒಟ್ಟು 571 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಗುರುವಾರ ಒಂದೇ ದಿನ 143 ಸೋಂಕಿತ ಪ್ರಕರಣ ವರದಿಯಾಗಿದೆ.

ಅತೀ ಹೆಚ್ಚು ಸೋಂಕು ಹರಡಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿಯೇ ಇದೆ. ಒಂದೇ ದಿನ ಮಹಾರಾಷ್ಟ್ರದಲ್ಲಿ 2 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣ ವರದಿಯಾಗಿದೆ. ಈವರೆಗೆ 41,642 ಮಂದಿ ಸೋಂಕಿಗೆ ತುತ್ತಾಗಿದ್ದು, 1,454 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 11,726 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮುಂಬೈ ಒಂದರಲ್ಲೇ ಈವರೆಗೆ 25 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.



