- ನಾಗರಾಜ ಸಿರಿಗೆರೆ , ಕನ್ನಡ ಅಧ್ಯಾಪಕ, ದಾವಣಗೆರೆ, ಚರವಾಣಿ- 789262-57625
ಇಡೀ ಜಗತ್ತು ಕೊರೊನ ವೈರಸ್ಸಿನಿಂದ ತಲ್ಲಣಿಸುತ್ತಿದೆ. ದಿನದಿಂದ ದಿನಕ್ಕೆ ಈ ವೈರಸ್ ರಕ್ತ ಬೀಜಾಸುರನಂತೆ ಹಬ್ಬಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಪ್ರಪಂಚದ ಎಲ್ಲಾ ದೇಶಗಳ ನಾಯಕರು ತಮ್ಮತಮ್ಮ ದೇಶಗಳನ್ನು ಈ ವೈರಸ್ಸಿನಿಂದ ಮುಕ್ತಗೊಳಿಸುವುದರ ಬಗ್ಗೆ ಚಿಂತಿಸುತ್ತಿದ್ದಾರೆ. ಇದೊಂದು ಸಾಮಾಜಿಕ ತುರ್ತು ಪರಿಸ್ಥಿತಿ.
ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಮಂತ್ರಿಗಳು ಕಳೆದ ಭಾನುವಾರ ರಾತ್ರಿ 9-00 ಗಂಟೆಗೆ ತಮ್ಮತಮ್ಮ ಮನೆಗಳ ಬಾಗಿಲಲ್ಲಿ ನಿಂತು ದೀಪ ಬೆಳಗಿಸಲು ಕೋರಿದರು. ಆಗ ದೇಶಬಾಂಧವರು ಜಾತಿ, ಮತ, ಪಂಥ, ಪಕ್ಷಗಳನ್ನು ಮರೆತು ದೀಪ ಬೆಳಗಿಸಿದರು. ಕೊರೊನ ವೈರಸ್ಸಿನಿಂದ ತಲ್ಲಣಿಸುತ್ತಿರುವ ಜನತೆಗೆ ಇದೊಂದು ಆತ್ಮವಿಶ್ವಾಸ ತುಂಬುವ ಪ್ರಯತ್ನ. ಇಂತಹ ಸಂದರ್ಭದಲ್ಲಿ ಭಾರತೀಯರು ರಾಷ್ಟ್ರದ ಅಖಂಡತೆ ಮತ್ತು ಐಕ್ಯತೆಯನ್ನು ಪ್ರದರ್ಶಿಸಿದರು. ಇದನ್ನೇ ಅನುಸರಿಸಿ ವೀರಶೈವ ಮತ್ತು ಲಿಂಗಾಯತ ಸಮುದಾಯದವರು 13-04-2020ರ ಸೋಮವಾರದಂದು ಸಂಜೆ 7-00 ಗಂಟೆಗೆ ಇಷ್ಟಲಿಂಗ ಪೂಜೆ ಮಾಡಲು ಕರೆನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಭಾರತವು ಬಹುಸಂಸ್ಕೃತಿಯ ದೇಶ. ಇಲ್ಲಿ ಹಲವು, ಧರ್ಮ, ಜಾತಿ, ಭಾಷೆಗಳಲ್ಲಿ ವೈವಿಧ್ಯತೆಗಳಿವೆ. ಈ ಕಾರಣಗಳಿಗೆ ಭಾರತವನ್ನು ನಮ್ಮ ಸಂವಿಧಾನದಲ್ಲಿ ಜಾತ್ಯತೀತ ದೇಶವೆಂದು ಘೋಷಿಸಲಾಗಿದೆ. ಆದುದರಿಂದ ರಾಷ್ಟ್ರದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಒಂದುಗೂಡಿಸಿ, ರಾಷ್ಟ್ರೀಯ ಪ್ರಗತಿ ಸಾಧಿಸುವುದು ನಮ್ಮ ಸಂವಿಧಾನದ ವಿಧಿಯಾಗಿದೆ.
ಭಾರತದ ಪ್ರಜೆಗಳಾದ ಪ್ರತಿಯೊಬ್ಬರು ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಕರ್ತವ್ಯವಾಗಿದೆ. ದೇಶವು ಹಿಂದೆಂದು ಕಂಡರಿಯದ ವಿಪತ್ತನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಒಂದು ಧರ್ಮದವರು ತಮ್ಮ ಧಾರ್ಮಿಕ ಆಚರಣೆಯ ಮೂಲಕ ಕೊರೊನ ವೈರಸ್ಸನ್ನು ಓಡಿಸಲು ಕರೆಕೊಟ್ಟಿರುವುದು ಸಂಕುಚಿತ ಭಾವನೆಯಾಗುತ್ತದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಧಾರ್ಮಿಕ ಆಚರಣೆಗಳಿಗೆ ಕರೆ ಕೊಡುವುದರಿಂದ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇತರೆ ಧರ್ಮಿಯರು ತಮ್ಮ ಧರ್ಮದ ಆಚರಣೆಗೆ ಕರೆಕೊಟ್ಟರೆ ಮತೀಯ ಭಾವನೆಗಳು ಮುನ್ನೆಲೆಗೆ ಬಂದು ದೇಶದ ಏಕತೆಗೆ ಭಂಗ ತರುತ್ತದೆ. ಆಗ ದೇಶದ ರಕ್ಷಣಾ ವ್ಯವಸ್ಥೆ ಕೊರೊನ ವೈರಸ್ ವಿರುದ್ಧ ಹೋರಾಡುವುದರ ಬದಲು ದೇಶದಲ್ಲಿ ಮತೀಯ ಸಾಮರಸ್ಯ ಕಾಪಾಡಲು ಮುಂದಾಗಬೇಕಾಗುತ್ತದೆ.
ಯಾವುದೇ ಧಾರ್ಮಿಕ ಆಚರಣೆ ಅಥವಾ ಪೂಜೆ ಖಾಸಗಿಯಾದವು. ಅವುಗಳ ಬಹಿರಂಗ ಆಚರಣೆಯಾದರೆ ಕೇವಲ ತೋರಿಕೆಯಾಗುತ್ತದೆ. ಇಷ್ಟಲಿಂಗ ಪೂಜೆ ಎಂಬುದು ಆಯಾಯ ವ್ಯಕ್ತಿಯ ಸ್ವಾತಂತ್ರ್ಯ. ಲಿಂಗವನ್ನು ಆಯತ ಮಾಡಿಕೊಂಡಿರುವವರು ಪ್ರತಿನಿತ್ಯ ಅವರ ಇಷ್ಟಾನುಸಾರ ಪೂಜಿಸಿಕೊಳ್ಳುತ್ತಿರುತ್ತಾರೆ. ಹೀಗಿರುವಾಗ ನಿರ್ದಿಷ್ಟ (ಲಿಂಗಾಯತ ಮತ್ತು ವೀರಶೈವ) ಸಮುದಾಯಕ್ಕೆ ಕರೆ ನೀಡಿರುವುದು ಪ್ರತೇಕತಾ ಭಾವನೆಯ ಸೂಚನೆಯಾಗುತ್ತದೆ ಎಂಬುದು ಶ್ರೀಗಳವರ ಇಂಗಿತಾರ್ಥ. ಇಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಿರೋಧಿಸಿರುವುದು ಇಂತಹ ಒತ್ತಾಯದ ಆಚರಣೆಗೆ ವಿನಾ ಇಷ್ಟಲಿಂಗ ಪೂಜೆಗಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ರಾಷ್ಟ್ರಕವಿ ಕುವೆಂಪು ಅವರು `ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದಾರೆ. ಆದುದರಿಂದ ಇಲ್ಲಿ ಶಾಂತಿ, ಸಮೃದ್ಧಿಗೆ ಹಿತವಾಗುವಂತೆ ನಡೆದುಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಜವಬ್ದಾರಿಯಾಗಿರುತ್ತದೆ.