Connect with us

Dvgsuddi Kannada | online news portal | Kannada news online

ಕೊರೊನಾ ಎದುರಿಸಲು 8 ಉತ್ಪನ್ನ ಲೋಕಾರ್ಪಣೆ ಮಾಡಿದ ಸರ್ಕಾರ  

ದಾವಣಗೆರೆ

ಕೊರೊನಾ ಎದುರಿಸಲು 8 ಉತ್ಪನ್ನ ಲೋಕಾರ್ಪಣೆ ಮಾಡಿದ ಸರ್ಕಾರ  

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಹೊಸ ಮಾದರಿಗೆ ಮುಂದಾಗಿದೆ.  ಇಂದು ವಿವಿಧ ಉತ್ಪನ್ನಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದರು.

ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯಾಪ್ತಿಯ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರ (ಬಿಬಿಸಿ) ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಡಾ.ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದ್ದಾರೆ. ಪದ್ಮ ವೈಟಲ್ಸ್, ಮಲ್ಲೀಸ್ ಕಾರ್ಡಿಟೀ, ಸಿಡಿ 4 ಷೀಲ್ಡ್, ಭೀಮ್ ರೋಟಿ, ಇಮ್ಯೂನ್ ಬೂಸ್ಟರ್- ಡೈಲಿ ಡ್ರಾಪ್ಸ್, ವೆಜ್ ಫಲ್ ಸ್ಯಾನಿಟೈಸರ್, ವಾಟರ್ ಸ್ಯಾನಿಟೈಸರ್, ಆ್ಯಂಟಿ- ಮೈಕ್ರೋಬಿಯಲ್ ಎಚ್‍ವಿಎಸಿ ಮಾಡ್ಯೂಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಐಐಬಿಎಂ-ಬಿಬಿಸಿ ಯಿಂದ ಎಂಒಯುಗೆ ಸಹಿ ಹಾಕಲಾಗಿದೆ.

ಪದ್ಮ ವೈಟಲ್ಸ್

ಕಾರ್ಡಿಯಾಕ್ ಡಿಸೈನ್ ಲ್ಯಾಬ್ಸ್ ನ ಡಾ.ಮದನ್ ಗೋಪಾಲ್ ಈ ಕೇಂದ್ರೀಕೃತ ಆರೋಗ್ಯ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಯ ಇಸಿಜಿ, ಉಸಿರಾಟ, ಎಸ್‍ಪಿಒ 2 ಮತ್ತು ದೇಹದ ಉಷ್ಣತೆ ಮೇಲೆ ನಿರಂತರವಾಗಿ ನಿಗಾ ಇರಿಸುವುದರ ಜೊತೆಗೆ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಟೆಲಿಮೆಟ್ರಿ ಮೂಲಕ ರವಾನಿಸುತ್ತದೆ. ಮುನ್ನೆಚ್ಚರಿಕೆ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ರೋಗಿಗಳ ಶರೀರವನ್ನು ಮುಟ್ಟದೇ ನಿಗಾ ವಹಿಸಬಹುದಾಗಿದೆ. ಹೀಗಾಗಿ ಕೋವಿಡ್-19 ಸೋಂಕಿನ ಚಿಕಿತ್ಸೆ ಸಂದರ್ಭದಲ್ಲಿ ಉಪಯುಕ್ತವಾಗಲಿದೆ. ಇದನ್ನು ನಾರಾಯಣ ಹೃದಯಾಲಯದಲ್ಲಿ ದೃಢೀಕರಿಸಲಾಗಿದೆ.

ಐಸಿಯು ಪೇಷೆಂಟ್ ಮಾನಿಟರ್ ಒದಗಿಸುವ ಬಹುತೇಕ ಅಂಶಗಳು ಇದರಲ್ಲಿವೆ. ಇದನ್ನು ಬಳಸಿ ಯಾವುದೇ ಸಾಮಾನ್ಯ ಹಾಸಿಗೆಯನ್ನು ಮಾನಿಟರ್ಡ್ ಬೆಡ್ ಆಗಿ ಬದಲಾಯಿಸಬಹುದು. ಬೆಲೆ ಕಡಿಮೆ ಇದ್ದು, ಹಗುರವಾಗಿರುವುದರಿಂದ ರೋಗಿಯ ಮೇಲಿಡುವ ನಿಗಾ ಸಾಮಥ್ರ್ಯ ಹೆಚ್ಚಾಗುತ್ತದೆ. ರೋಗಿಯ ಇಸಿಜಿ, ಉಸಿರಾಟ, ಎಸ್‍ಪಿಒ2 ಮತ್ತು ದೇಹದ ಉಷ್ಣತೆಯನ್ನು ದಾಖಲಿಸಲು ಬೇಕಾಗುವ ನರ್ಸ್ ಗಳ ಸಂಖ್ಯೆಯನ್ನು ತಗ್ಗಿಸುತ್ತದೆ.

ಮಲ್ಲೀಸ್ ಕಾರ್ಡಿಟೀ

ರೋಗ ನಿರೋಧಕ ಶಕ್ತಿ ಉದ್ದೀಪಕವಾದ ಇದನ್ನು ಮಲ್ಲಿಪಾತ್ರ ನ್ಯೂಟ್ರಾಸ್ಯೂಟಿಕಲ್ಸ್ ನ ಡಾ.ಮೌಷ್ಮಿ ಮೊಂಡಲ್ ಅಭಿವೃದ್ಧಿಪಡಿಸಿದ್ದಾರೆ. ಔಷಧೀಯ ಗುಣವುಳ್ಳ ಅಣಬೆಯಾದ `ಕಾರ್ಡಿಸೆಪ್ಸ್’ ಬಳಸಿ ಇದನ್ನು ತಯಾರಿಸಲಾಗಿದೆ. ಪ್ರಯೋಗಾಲಯ ಪರಿಸ್ಥಿತಿಗಳಲ್ಲಿ ಬೆಳೆಯಲಾಗುವ ಈ ಅಣಬೆ ತಳಿಯು ವೈರಾಣು ನಿರೋಧಕ ಗುಣಸ್ವಭಾವ ಹೊಂದಿದೆ. ಕೋವಿಡ್-19 ಸನ್ನಿವೇಶದಲ್ಲಿ ವ್ಯಕ್ತಿಯ ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದು ಪೇಟೆಂಟ್ ಹೊಂದಿದ್ದು, ಎಸ್‍ಎಸ್‍ಎಸ್‍ಎಐನಿಂದ ಅನುಮೋದನೆಗೊಂಡಿದೆ.

ಈ ಕಾರ್ಡಿಯೋಸೆಪ್‍ಗಳ ಸಕ್ರಿಯ ಸಂಯೋಜನೆ ನೈಸರ್ಗಿಕವಾಗಿ ಬೆಳೆದ ಕಾರ್ಡಿಯೋಸೆಪ್ ಗಳಂತೆಯೇ ಇರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಇದು ದೇಹದಲ್ಲಿ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುತ್ತದೆ. ದೇಹದಲ್ಲಿನ ನಂಜುಕಾರಕಗಳನ್ನು ನಿವಾರಿಸಿ ದೇಹ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದನ್ನು 2-3 ಗ್ರಾಂ. ನಂತೆ 15 ದಿನಗಳ ಕಾಲ ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು. ನೂತನ ವಿಧಾನ ಬಳಸಿ ಇದರ ಸಕ್ರಿಯ ಘಟಕಾಂಶವನ್ನು 20 ಮಿ.ಗ್ರಾಂ.ಗೆ ಸಂವರ್ಧಿಸಲಾಗಿದೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ ಇದು ಅತ್ಯುತ್ತಮ ಫಲಿತಾಂಶ ನೀಡಿದೆ. ಇದರ ಬೆಲೆ 30 ಗ್ರಾಂ. ಗೆ 2400 ರೂ. ಆಗಿದೆ.

ಸಿಡಿ 4 ಷೀಲ್ಡ್

ಬಾಯಲ್ಲಿರಿಸಿಕೊಂಡು ಚೀಪಬಹುದಾದ ಈ ಮಾತ್ರೆಯನ್ನು ಸ್ಟೇಬಿಕಾನ್ ಕಂಪನಿಯ ಡಾ.ವಿಜಯ್ ಲಂಕಾ ಮತ್ತು ತಂಡದವರು ಅಭಿವೃದ್ಧಿಪಡಿಸಿದ್ದಾರೆ. ಇದು ಉರಿಯೂತ ಮತ್ತು ಸೋಂಕಿನ ವಿರುದ್ಧ ಹೋರಾಡುವ ಕ್ಯೂರ್ ಕ್ಯುಮಿನ್ ಮತ್ತು ವಿಟಮಿನ್ ಬಿ 12 ಅನ್ನು ಒಳಗೊಂಡಿದೆ. ದೇಹದೊಳಗೆ ವೈರಾಣು ಬೀರುವ ಪ್ರಭಾವಕ್ಕೆ ಅನುಗುಣವಾಗಿ ಸಿಡಿ4+, ಸಿಡಿ8+ ಮತ್ತು ಐಎಫ್‍ಎನ್ ಗಳನ್ನು ಸಕ್ರಿಯಗೊಳಿಸುವ ಮೂಲಕ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ರೋಗ ನಿರೋಧಕತೆಯನ್ನು ಮಾರ್ಪಾಡುಗೊಳಿಸುವ ಗುಣಸ್ವಭಾವಗಳನ್ನು ಹೊಂದಿರುವುದರ ಜೊತೆಗೆ ವೈರಾಣು ಸೋಂಕಿಗೆ ಪ್ರತಿಕ್ರಿಯೆಯಾಗಿ ಸೈಟೋಕೈನ್ ದಾಳಿಯನ್ನು ತಗ್ಗಿಸುತ್ತದೆ. ಇದು ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣಗಳ ಪ್ರಾಧಿಕಾರ ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿದೆ.

ಭೀಮ್ ರೋಟಿ

ಚಪಾತಿ ರೂಪದಲ್ಲಿರುವ ಈ ರೋಗ ನಿರೋಧಕ ಉದ್ದೀಪಕವನ್ನು ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರು ಅಭಿವೃದ್ಧಿಪಡಿಸಿದ್ದಾರೆ. ಆಯುಷ್ ಸಚಿವಾಲಯವು ಶಿಫಾರಸು ಮಾಡಿದ ಗಿಡಮೂಲಿಕೆಗಳ ಮಿಶ್ರಣಗಳನ್ನು ಒಳಗೊಂಡಿರುವುದು ಇದರ ವಿಶೇಷ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ಇದು, ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಈ ಚಪಾತಿಗಳು ಹೆಚ್ಚಿನ ಬಾಳಿಕೆ ಅವಧಿಯನ್ನು ಹೊಂದಿದ್ದು, ಸಂಗ್ರಹಿಸಿಡುವುದು ಕೂಡ ಸುಲಭವಾಗಿದೆ.

ಪ್ರತಿ ಚಪಾತಿ 40 ಗ್ರಾಂ. ಇದ್ದು, 200 ಮೈಕ್ರೋಗ್ರಾಂ ಗಿಡಮೂಲಿಕೆ ಸಾರವನ್ನು ಒಳಗೊಂಡಿರುತ್ತದೆ. ಇದು `ರೆಡಿ ಟು ಈಟ್’ ಆಗಿದ್ದು, ತವಾ ಮೇಲೆ ಬಿಸಿ ಮಾಡಿಕೊಂಡು ತಿನ್ನಬಹುದು. ಕೊಠಡಿ ತಾಪಮಾನದಲ್ಲಿ 6 ತಿಂಗಳು ಬಾಳಿಕೆ ಅವಧಿ ಹೊಂದಿರುತ್ತದೆ. ಶುಂಠಿ, ಕರಿಮೆಣಸು, ಅರಿಶಿನ, ಲವಂಗ, ಕಪ್ಪು ಜೀರಿಗೆ, ಜೀರಿಗೆಗಳ ಮಿಶ್ರಣದಿಂದ ಹೊರತೆಗೆಯಲಾದ ಸಾರ ಇದರಲ್ಲಿರುತ್ತದೆ. ಇದಕ್ಕೆ ಯಾವುದೇ ಪ್ರಿಸರ್ವೇಟಿವ್ ಬಳಸುವುದಿಲ್ಲ. ಜೊತೆಗೆ ಬೇಯಿಸಿದ ನಂತರವೂ ಇದರ ಸಕ್ರಿಯ ಘಟಕಾಂಶಗಳು ಸತ್ವ ಕಳೆದುಕೊಳ್ಳುವುದಿಲ್ಲ ಎಂಬುದು ತಯಾರಕರ ವಿವರಣೆ. ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿರುವ ಈ ಉತ್ಪನ್ನದ ಪೇಟೆಂಟ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

ಇಮ್ಯೂನ್ ಬೂಸ್ಟರ್

ರೋಗ ಪ್ರತಿರೋಧ ಶಕ್ತಿ ಉದ್ದೀಪಿಸುವ ಈ ಹನಿಯನ್ನು ಕೂಡ ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರೇ ಅಭಿವೃದ್ಧಿಪಡಿಸಿದ್ದಾರೆ. ಇದು ಸಹ ಆಯುಷ್ ಸಚಿವಾಲಯ ಶಿಫಾರಸು ಮಾಡಿರುವ ಗಿಡಮೂಲಿಕೆ ಮಿಶ್ರಣಗಳನ್ನು ಒಳಗೊಂಡಿದೆ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಒಂದು ಲೋಟ ಬಿಸಿ ನೀರಿಗೆ ಇದರ ಒಂದೇ ಒಂದು ಹನಿಯನ್ನು ಸೇರಿಸುವ ಮೂಲಕ ಪರಿಣಾಮ ಪಡೆಯಬಹುದು.

250 ಮಿ.ಲೀ. ಬಿಸಿ ನೀರು ಹಾಗೂ 100 ಮಿ.ಲೀ. ಹಾಲಿಗೆ ಸೇರಿಸಿಕೊಂಡು ಕುಡಿಯಬಹುದು. ಇದರ ಬಾಳಿಕೆ ಅವಧಿ 3 ವರ್ಷಗಳು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಒಪ್ಪಿತವಾದ `ಗೋಲ್ಡನ್ ಮಿಲ್ಕ್’ ನ ಸುಧಾರಿತ ರೂಪ ಇದಾಗಿದೆ. ಅರಿಶಿನ, ಶುಂಠಿ, ಕಪ್ಪು ಜೀರಿಗೆ, ಜೀರಿಗೆ, ಲವಂಗ, ಕರಿ ಮೆಣಸಿನ ಸಕ್ರಿಯ ಘಟಕಾಂಶಗಳನ್ನು ಇದು ಒಳಗೊಂಡಿದೆ ಎಂಬುದು ಕಂಪನಿಯ ವಿವರಣೆ. ಇದೂ ಸಹ ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿದೆ.

ವೆಜ್ ಫಲ್ 

ಕ್ರಿಮ್ಮಿ ಬಯೋಟೆಕ್ ನ ದೀಪಕ್ ಭಜಂತ್ರಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಮೈಕ್ರೋಬ್ ಗಳ (ಸೂಕ್ಷ್ಮಾಣುಜೀವಿಗಳ) ವಿರುದ್ಧ ಪರಿಣಾಮಕಾರಿಯಾದ ಮತ್ತು ಕೀಟನಾಶಕಗಳನ್ನು ಹೊರಸೆಳೆಯಬಲ್ಲ ಈ ಸ್ಯಾನಿಟೈಸರ್ ನ್ನು ಖಾದ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗಿದೆ. ಇದು ಕ್ಲೋರಿನ್ ಹಾಗೂ ಆಲ್ಕೋಹಾಲ್ (ಮದ್ಯಸಾರ) ಮುಕ್ತ ಎಂಬುದು ಗಮನಾರ್ಹ ಅಂಶ.

1 ಲೀಟರ್ ನೀರಿಗೆ 10 ಮಿ.ಲೀ. ದ್ರಾವಣ ಹಾಕಿ ಅದರಲ್ಲಿ 3 ನಿಮಿಷ ಕಾಲ ಹಣ್ಣು ಮತ್ತು ತರಕಾರಿಗಳನ್ನು ನೆನೆಸಬೇಕು. ನಂತರ, ಕೈಯಿಂದ ಹಣ್ಣು ಹಾಗೂ ತರಕಾರಿಗಳನ್ನು ಉಜ್ಜಿ ಹೊರತೆಗೆದು ಅವನ್ನು ಬಳಕೆ ಯೋಗ್ಯ ನೀರಿನಿಂದ ತೊಳೆಯಬೇಕು. ಇದು ಹಣ್ಣು ಹಾಗೂ ತರಕಾರಿಗಳನ್ನು ವೈರಾಣು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ ಎನ್ನಲಾಗಿದೆ. ಇದರ ಬೆಲೆ 500 ಎಂ.ಎಲ್.ಗೆ 150 ರೂ. ಆಗಿದೆ.

ವಾಟರ್ ಸ್ಯಾನಿಟೈಸರ್

ಯುವಿ ಪ್ಯೂರಿಫೈಯರ್ ನ ಕಿರುರೂಪವಾದ ಇದನ್ನು ಬಯೋಫೈ ಕಂಪನಿಯ ರವಿಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ನೀರಿನ ನಲ್ಲಿಗೆ ಇದನ್ನು ಅಳವಡಿಸಬಹುದು. ಫೇಜಸ್ ನಂತಹ ವೈರಾಣು ಸೇರಿದಂತೆ ಶೇ.99ರಷ್ಟು ಮೈಕ್ರೋಬ್ ಗಳನ್ನು ಇದು ಯಶಸ್ವಿಯಾಗಿ ಕೊಲ್ಲಲಿದೆ.

ಆ್ಯಂಟಿಮೈಕ್ರೋಬಿಯಲ್ ಎಚ್ವಿಎಸಿ ಮಾಡ್ಯೂಲ್: ಎಚ್‍ವಿಎಸಿ ಸಿಸ್ಟಮ್ ಗೆ ಅಳವಡಿಸಬಹುದಾದ ಈ ಮಾಡ್ಯೂಲ್ (ಘಟಕ) ನ್ನು ಬಯೋಫೈ ನ ರವಿ ಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ಒಳಬರುವ ಗಾಳಿಯನ್ನು ನಿರ್ಮಲಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಪ್ರದೂಷಣೆಯಿಂದ ಕೂಡಿರುವ ಸಾಧ್ಯತೆಯಿರುವ ಹವಾನಿಯಂತ್ರಿತ ಗಾಳಿ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇದು ಸಹಕಾರಿ. ಹೀಗಾಗಿ, ಕೋವಿಡ್-19 ಸನ್ನಿವೇಶದಲ್ಲಿ ಇದರಿಂದ ಹೆಚ್ಚಿನ ಉಪಯೋಗವಿದೆ. ಯುವಿ=ಟೈಟಾನಿಯಂ ಡೈಯಾಕ್ಸೈಡ್ ತಾಂತ್ರಿಕತೆ ಆಧರಿಸಿ ಇದನ್ನು ರೂಪಿಸಲಾಗಿದೆ. ಪೇಟೆಂಟ್ ಹೊಂದಿರುವ ಈ ಉತ್ಪನ್ನವು ದೃಢೀಕರಣಗೊಂಡಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top