ಡಿವಿಜಿ ಸುದ್ದಿ, ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿನ ಸಿಬ್ಬಂದಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಹೆಚ್ಚುವರಿ ಚಾಲಕನಿಗೆ ಕೊರೊನಾ ಪಾಸಿಟವ್ ಪತ್ತೆಯಾಗಿದೆ.
ಸಿಎಂ ಸುತ್ತಮುತ್ತ ಇರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಕೊವಿಡ್ ಮಾರ್ಗಸೂಚಿ ಪ್ರಕಾರ ದ್ವಿತೀಯ ಸಂಪರ್ಕಿತರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮನ್ನು ತಾವು ಕ್ವಾರಂಟೈನ್‌ಗೆ ಒಳಪಡಿಸಿಕೊಂಡಿದ್ದಾರೆ.ಕೆಲವು ದಿನಗಳ ಕಾಲ ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ.ಅಧಿಕಾರಿಗಳ ಜತೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ದೃಢಪಡಿಸಿವೆ.
ಮುಖ್ಯಮಂತ್ರಿಯವರು ನಿರಂತರ ಕಾರ್ಯ ನಿರ್ವಹಿಸುತ್ತಿದ್ದು, ಒತ್ತಡ ಹೆಚ್ಚಾಗಿದೆ. ಆದ್ದರಿಂದ ಬಿಡುವು ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು, ನೆಗೆಟಿವ್ ಬಂದಿತ್ತು. ಸೋಮವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.ಮೂಲಗಳ ಪ್ರಕಾರ ಮುಖ್ಯಮಂತ್ರಿ ಗೃಹ ಕಚೇರಿಯ ಸುಮಾರು 10 ಜನರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ, ಕಾವೇರಿ ನಿವಾಸಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿ ಡ್ ನಿಯಂತ್ರಣಕ್ಕೆ ಸಹಕರಿಸಿ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.



