ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾದಿಂದ ಬೆಂಗಳೂರಿನ ಮಣಿಪಾಲ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಅವರು ನಿಧನರಾಗಿದ್ದಾರೆ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ವಾಹಿನಿಗಳಲ್ಲಿ ಪ್ರಸಾರವಾಗಿ ಸಾಕಷ್ಟು ಗೊಂದಲ ಮೂಡಿಸಿತ್ತು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳುಸುದ್ದಿ ಗಮನಿಸಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ರಾಜ್ಯ ನಾಯಕರು ತಮ್ಮ ಟ್ವಿಟರ್ ಖಾತೆಗಳಲ್ಲಿ ಸಂತಾಪ ಸೂಚಿಸಿದ್ದರು. ಗುರುವಾರ ಸಂಜೆ ಮಣಿಪಾಲ್ ಆಸ್ಪತ್ರೆಯಿಂದ ಹೊರಬಿದ್ದ ಪ್ರಕಟಣೆಯ ಬಳಿಕ ತಮ್ಮ ಸಂದೇಶಗಳನ್ನು ಬದಲಿಸಿಕೊಂಡು ಗಸ್ತಿ ಅವರಿಗೆ ಮರುಜನ್ಮ ದೊರಕಲಿ, ಬೇಗನೆ ಗುಣಮುಖರಾಗಿ ಹೊರಬರಲಿ ಎಂದು ಶುಭ ಹಾರೈಸುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿವೆ.
ರಾಜ್ಯ ಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿ ಅವರ ಆರೋಗ್ಯ ಕುರಿತು ಕೆಲವು ವರದಿಗಳು ಪ್ರಸಾರವಾಗುತ್ತಿದೆ.
ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದ್ದು, ಅವರು ಮರುಜನ್ಮ ಪಡೆದು ಆರೋಗ್ಯವಂತರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. pic.twitter.com/mFpYVJOQEy
— BJP Karnataka (@BJP4Karnataka) September 17, 2020
ಇತ್ತೀಚೆಗಷ್ಟೇ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾಯಚೂರು ಜಿಲ್ಲೆಯ ಲಿಂಗಸೂರಿನವರಾದ ಗಸ್ತಿಯವರಿಗೆ ಕಳೆದ ಎರಡು ವಾರಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೋನಾಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಸದಸ್ಯರಾಗಿದ್ದ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದವರು. ಅವರು ಬಳ್ಳಾರಿ ಜಿಲ್ಲೆ, ಕೊಪ್ಪಳ ಜಿಲ್ಲೆ ಮತ್ತು ರಾಯಚೂರು ಜಿಲ್ಲೆಯ ಪಕ್ಷದ ಉಸ್ತುವಾರಿ ವಹಿಸಿದ್ದರು.2020 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವವರೆಗೆ ಎಂದಿಗೂ ಬೆಳಕಿಗೆ ಬಂದಿರಲಿಲ್ಲ.



