Connect with us

Dvgsuddi Kannada | online news portal | Kannada news online

ಜ. 28ರಿಂದ ಸ್ಪರ್ಧಾತ್ಮಕ  ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭ : ಕಲಪತಿ ವಿ.ಎಸ್ ಹಲಸೆ

ದಾವಣಗೆರೆ

ಜ. 28ರಿಂದ ಸ್ಪರ್ಧಾತ್ಮಕ  ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭ : ಕಲಪತಿ ವಿ.ಎಸ್ ಹಲಸೆ

ಡಿವಿಜಿ ಸುದ್ದಿ, ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗದ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಳ ಅನುಕೂಲಕ್ಕಾಗಿ ದಾವಣಗೆರೆ ವಿಶ್ವ ವಿದ್ಯಾನಿಲಯದಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ವಿ. ಶರಣಪ್ಪ ಹಲಸೆ ತಿಳಿಸಿದರು.

ದಾವಣಗೆರೆ ವಿಶ್ವ ವಿದ್ಯಾನಿಲಯದ ಆಡಳಿತ ಭವನದಲ್ಲಿ ಇಂದು ಏರ್ಪಡಿಸಲಾಗಿದ್ದ, ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ವಿ.ವಿ ಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಆರಂಭಿಸಲು ಬಹಳ ಹಿಂದಿನಿಂದಲೂ ಪ್ರಯತ್ನ ನಡೆಸಲಾಗುತ್ತಿತ್ತು. ಈ ಬಾರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಹೆಚ್ಚಿನ ಆಸಕ್ತಿ ಮತ್ತು ಪ್ರೇರಣೆಯಿಂದಾಗಿ ತರಬೇತಿ ಕೇಂದ್ರ ಆರಂಭವಾಗುತ್ತಿದೆ. ಅವರುಗಳು ವೈಯಕ್ತಿಕವಾಗಿ ರೂ.3 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಪುಸ್ತಕ, ರ್ಯಾಕ್ ಮತ್ತಿತರ ಸಾಮಾಗ್ರಿಗಳನ್ನು ನೀಡುವ ಮೂಲಕ ತರಬೇತಿ ಕೇಂದ್ರ ಆರಂಭಿಸಲು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್, ಐಪಿಎಸ್, ಕೆಎಎಸ್ ಮತ್ತಿತರ ಪರೀಕ್ಷೆಗಳಿಗೆ ಸಿದ್ಧತೆಯ ತರಬೇತಿ ಮತ್ತು ಮಾರ್ಗದರ್ಶನ ತರಗತಿಗಳಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದರು.

ತರಬೇತಿ ಕೇಂದ್ರದಲ್ಲಿ ಈ ವರ್ಷ 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದ್ದು, ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಪರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದರಲ್ಲಿ ದಾ.ವಿ.ವಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಜ.13 ಕೊನಯ ದಿನ.  ಜನವರಿ 19 ರಂದು ಪರೀಕ್ಷೆ ನಡೆಯಲಿದ್ದು, ಜ. 28 ರಂದು ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಮತ್ತು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರವೇಶ ಪರೀಕೆಗೆ ಹಾಜರಾಗಬಹುದು.

ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ನೆರವೇರಿಸಿ ಆರಂಭಿಕ ಮಾರ್ಗದರ್ಶನ ನೀಡಲಿದ್ದಾರೆ..  ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅವರ ಮಾರ್ಗದರ್ಶನದಲ್ಲಿ ವಿ.ವಿಯ ಪ್ರಾಧ್ಯಾಪಕರು, ವಿವಿಧ ಕ್ಷೇತ್ರದ ವಿಷಯಗಳ ಪರಿಣಿತರು, ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಅಧಿಕಾರಿಗಳು, ತಜ್ಞರಿಂದ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪಿಎಸ್‍ಐ, ಬ್ಯಾಂಕಿಂಗ್, ಎಸ್‍ಎಸ್‍ಸಿ, ರೈಲ್ವೆ, ಪಿಡಿಒ, ಎಫ್‍ಡಿಎ, ಎಸ್‍ಡಿಎ, ಯುಜಿಸಿ ನೆಟ್, ಎಸ್‍ಎಲ್‍ಇಟಿ ಹಾಗೂ ಇತರೆ ಪರೀಕ್ಷೆಗಳಿಗೂ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್‍ಗೆ ಸಂಜೆ 4 ರಿಂದ ರಾತ್ರಿ 8 ರವರೆಗೆ ತರಬೇತಿ ನೀಡಲಾಗುವುದು. ಪ್ರವೇಶ ಪರೀಕ್ಷೆಗೆ ಶುಲ್ಕ ರೂ.100 ಗಳನ್ನು ನಿಗಧಿಪಡಿಸಲಾಗಿದೆ. ಪ್ರವೇಶ ಪರೀಕ್ಷೆಯಲ್ಲಿ ಮೊದಲ 5 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಆಯ್ಕೆಯಾದ ಉಳಿದ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಶುಲ್ಕ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಬಸವರಾಜ ಬಣಕಾರ್, ಸಿಂಡಿಕೇಟ್ ಸದಸ್ಯ ಜಯಪ್ರಕಾಶ್ ಕೊಂಡಜ್ಜಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಡಾ.ಅಶೋಕ್ ಕುಮಾರ ಪಾಳೇದ, ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ, ಸಹ ಪ್ರಾಧ್ಯಾಪಕ ವಿನಯ್ ಎಂ. ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top