ಡಿವಿಜಿ ಸುದ್ದಿ, ಕಾರವಾರ: ಸಮುದ್ರದ ತಳ ಭಾಗದಲ್ಲಿ ವಾಸಿಸುವ ಅಪರೂಪದ ಜಲಚರ ಕಾಯಿನ್ ಮೀನು ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್‍ನಲ್ಲಿ ಕಾಣಿಸಿಕೊಂಡು ಸ್ಥಳೀಯರನ್ನು ಅಚ್ಚರಿ ಮೂಡಿಸಿದೆ.
2 ರೂ. ಕಾಯಿನ್‍ನಂತಿರುವ ಈ ಮೀನುಗಳನ್ನು ನಾಣ್ಯದ ಮೀನು, ಡಾಲರ್ ಮೀನು ಸ್ಥಳೀಯರು ಕರೆಯುತ್ತಾರೆ. ಸ್ಟಾರ್ ಫಿಶ್ ಪ್ರಭೇದದ ಮೀನು ಇದಾಗಿದ್ದು ಆಹಾರವಾಗಿ ಬಳಸುವುದಿಲ್ಲ. ವಿಶ್ವದಲ್ಲಿ 600 ಜಾತಿಯ ಪ್ರಬೇಧದ ಡಾಲರ್ ಮೀನುಗಳಿದ್ದು ಭಾರತದಲ್ಲಿ ಗುಜರಾತ್, ಕೇರಳದಲ್ಲಿ ಮೂರು ಪ್ರಬೇಧಗಳು ಮಾತ್ರ ಕಾಣಸಿಗುತ್ತವೆ.

ಕಡಲಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಈಗ ಕರ್ನಾಟಕದ ಕರಾವಳಿ ಭಾಗದಲ್ಲಿ ಸಹ ಗೋಚರವಾಗುತಿದ್ದು, ಅಪರೂಪದ ಮೀನುಗಳಲ್ಲಿ ಒಂದಾಗಿದೆ. ಕಾರವಾರ ನಗರದ ರವೀಂದ್ರನಾಥ ಕಡಲ ತೀರದ ಮರಳಿನಲ್ಲಿ ಹತ್ತಾರು ಸಂಖ್ಯೆಯಲ್ಲಿ ಈ ಅಪರೂಪದ ಫಿಶ್ ಕಂಡುಬಂದಿದೆ. ನಕ್ಷತ್ರದ ಮೀನಿನ ಪ್ರಬೇಧಕ್ಕೆ ಸೇರಿದ ಇವುಗಳಿಗೆ ವೈಜ್ಞಾನಿಕವಾಗಿ ಕ್ಲಾಯಪೇಸ್ಟರ್ ರಾರಿಸ್ಪಯನಸ್ ಎಂದು ಕರೆಯಲಾಗುತ್ತದೆ. ಆಭರಣದಲ್ಲಿ ಅಳವಡಿಸುವ ಡಾಲರ್ ಮಾದರಿಯಲ್ಲಿಯೇ ಇವುಗಳ ದೇಹ ರಚನೆಯಿದೆ. ಇವು ಕಡಲಿನ ತಳದಲ್ಲಿರುವ 14 ರಿಂದ 15 ಮೀಟರ್ ಆಳದ ಮರಳುನಲ್ಲಿ ವಾಸ ಮಾಡುತ್ತವೆ. ಹಾಗಾಗಿ ಇವುಗಳು ಸ್ಯಾಂಡ್ ಡಾಲರ್ ಎಂದು ಪರಿಚಿತವಾಗಿದೆ.
ರಾಜ್ಯದ ಕರಾವಳಿಯಲ್ಲಿ ಮೊದಲ ಬಾರಿಗೆ 2006ರಲ್ಲಿ ಭಟ್ಕಳ ಮತ್ತು ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದವು. ಉಳಿದಂತೆ ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್, ಸ್ಪೇನ್ ಪೋರ್ಚುಗಲ್ ಮುಂತಾದ ದೇಶದ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.



