ಡಿವಿಜಿ ಸುದ್ದಿ, ಮಂಡ್ಯ: ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ಸಿಎಂ ಯಡಿಯೂರಪ್ಪ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರದ ಮನವೊಲಿಸಿ ಯೋಜನೆಗೆ ವಿಶೇಷ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ಕೆಆರ್‌ಎಸ್ ಜಲಾಶಯ 36 ಬಾರಿ ಗರಿಷ್ಠ ಮಟ್ಟ ತಲುಪಿದೆ. ಸತತವಾಗಿ ಮೂರನೇ ಬಾರಿ ತುಂಬಿರುವುದು ಸಂತಸದ ವಿಚಾರ. ನಾನು 5ನೇ ಬಾರಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುತ್ತಿರುವುದು ನನ್ನ ಪಾಲಿನ ಭಾಗ್ಯ ಎಂದರು.
ಈ ಬಾರಿ ಉತ್ತಮ ಮಳೆಯಿಂದ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿದ್ದು ಕೃಷಿಗೆ ಯಾವುದೇ ತೊಂದರೆ ಇಲ್ಲ. ಕೆಲವು ಕಡೆ ಅತಿವೃಷ್ಟಿ ಉಂಟಾಗಿದ್ದು, ಶೀಘ್ರ ಪರಿಹಾರ ವಿತರಿಸಲಾಗುವುದುಎಂದರು.
ಸರ್ಕಾರ ಕೆಆರ್‌ಎಸ್ ಜಲಾಶಯದ 16 ಗೇಟ್‌ಗಳ ದುರಸ್ತಿಗೆ 8.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದೆ. ನೀರಾವರಿ ಇಲಾಖೆ ಅಡಿ ರಾಜ್ಯದಾದ್ಯಂತ 75 ಸಾವಿರ ಕೋಟಿ ವೆಚ್ಚದಲ್ಲಿ 28 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಬಾಗಿನ ಅರ್ಪಣೆ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದರು. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಬೆಳಿಗ್ಗೆಯೇ ವಶಕ್ಕೆ ಪಡೆಯಲಾಗಿತ್ತು.



