ಡಿವಿಜಿ ಸುದ್ದಿ, ಮೈಸೂರು: ಬೆಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶ ದ್ರೋಹ ಆರೋಪ ಎದುರಿಸುತ್ತಿರುವ ಅಮೂಲ್ಯ ಲಿಯೋನ್ ನಕ್ಸಲ್ ಜತೆ ಸಂಪರ್ಕದಲ್ಲಿದ್ದಳು ಎಂದು ಈ ಹಿಂದೆ ಸಾಬೀತಾಗಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದರೂ,ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ಈ ಕೃತ್ಯದ ಹಿಂದಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ಇಂತಹ ವ್ಯವಸ್ಥಿತ ಸಂಚುಗಳು ನಡೆಯುತ್ತಿವೆ. ತಪ್ಪು ಮಾಡಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಕೊನೆಯಾಗುವುದಿಲ್ಲ ಎಂದು ಕಿಡಿಕಾರಿದರು.
ಸಂಘಟನೆಗಳನ್ನು ಸರಿಯಾಗಿ ತನಿಖೆಗೆ ಒಳಪಡಿಸಿದರೆ ಅವಳಿಗೆ ಈ ರೀತಿ ಪ್ರೇರಣೆ ಕೊಟ್ಟಿರುವುದು ಯಾರೆಂಬುದು ಗೊತ್ತಾಗುತ್ತದೆ. ಅವಳ ಕೈಕಾಲು ಮುರಿಯಿರಿ, ಜಾಮೀನು ಸಿಗಬಾರದು. ನಾನು ಅವಳ ರಕ್ಷಣೆಗೆ ನೀಡಲ್ಲ ಎಂದು ಅವಳ ತಂದೆಯ ಹೇಳಿದ್ದಾರೆ ಎಂದು ತಿಳಿಸಿದರು.