ಡಿವಿಜಿಸುದ್ದಿ.ಕಾಂ, ಹರಪನಹಳ್ಳಿ: ತಾಲ್ಲೂಕಿನ ಅಲಗಿಲವಾಡ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಭಯ ಹುಟ್ಟಿಸಿದ್ದ ಗಂಡು ಚಿರತೆ, ಬೆಳಗಿನಜಾವ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಹೊಲದಲ್ಲಿನ ಕುರಿ, ಮೇಕೆಗಳನ್ನು ತಿಂದು ಹಾಕುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ತಾಲೂಕಿನ ಅಲಗಿಲವಾಡ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಸೆರೆಯಾಗಿದೆ.ಅಲಗಿಲವಾಡ ಗ್ರಾಮದಲ್ಲಿ ಎ.ಎಂ.ವಿಶ್ವನಾಥ ಎಂಬುವವರ ಹೊಲದಲ್ಲಿ ಗುರುವಾರ ಸಂಜೆ ಬೋನು ಇಡಲಾಗಿತ್ತು.
4ರಿಂದ 5 ವರ್ಷದ ಗಂಡು ಚಿರತೆ ಬೋನಿನಲ್ಲಿ ಬಂಧಿಯಾಗಿದೆ. ಗ್ರಾಮದ ಸಮೀಪವಿರುವ ಹೊಲದಲ್ಲಿ ಕೃಷಿ ಹೊಂಡವಿದ್ದು, ನೀರು ಕುಡಿಯಲು ಚಿರತೆಗಳು ಬರುತ್ತದೆ ಎನ್ನುವ ನಿರೀಕ್ಷೆಯಿಂದ ಬೋನು ಇಡಲಾಗಿತ್ತು. ಹೊಲಗಳಲ್ಲಿ ಮೆಕ್ಕೆಜೋಳ ಮತ್ತು ತೆಂಗು ಬೆಳೆ ಇರುವುದರಿಂದ ರೈತರಿಗೆ ಚಿರತೆ ಕಾಣಿಸುತ್ತಿಲ್ಲ. ಆದರೆ ಕುರಿ, ಮೇಕೆಯ ಹಟ್ಟಿಯ ಮೇಲೆ ದಾಳಿ ನಡೆಸಿ ಕುರಿಗಳನ್ನು ತಿಂದು ಹಾಕುತ್ತಿತ್ತು.

ಕುರಿಗಾಯಿಗಳು ಬೋನು ಇಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಬೋನುಗಳ ಕೊರತೆ ಇರುವುದರಿಂದ ಮತ್ತೂರು ಬಳಿ ಇಟ್ಟಿದ್ದ ಬೋನು ಅನ್ನು ಕುರಿಗಾಯಿಗಳಾದ ಬಾಲಪ್ಪರ ರಾಘು, ಸಂತೋಷ, ನಾಗರಾಜ್, ರಾಜು, ಹಾಲೇಶ್, ಅಜ್ಜಪ್ಪ, ಪರುಶಪ್ಪ, ಪವನ್, ನಾಗರಾಜ್, ಕನ್ನಪ್ಪ ಎಂಬುವರು ಸ್ವತಃ ಟ್ರಾಕ್ಟರ್ ನಲ್ಲಿ ತಂದು ಗುರುವಾರ ಸಂಜೆ ಅಲಗಿಲವಾಡ ಗ್ರಾಮದ ಹೊಲದಲ್ಲಿ ಇಟ್ಟಿದ್ದರು. ಸಂಜೆ ಇಟ್ಟಿದ್ದ ಬೋನಿಗೆ ಬೆಳಗ್ಗೆ ಚಿರತೆ ಸರೆಯಾಗಿದೆ.

ಅಲಗಿಲವಾಡ ಗ್ರಾಮದಲ್ಲಿ ಸೆರೆಯಾಗಿರುವ ಚಿರತೆ ಸುಮಾರು ನಾಲ್ಕುರಿಂದ ಐದು ವರ್ಷದ ವಯೋಮಾನದಲ್ಲಿದೆ ಚಿರತೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಭರತ್ ತಿಳಿಸಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ 15ಕ್ಕೂ ಹೆಚ್ಚು ಕುರಿಗಳನ್ನು ಚಿರತೆ ತಿಂದು ಹಾಕಿವೆ. ಕಳೆದ ಮೂರು ದಿನಗಳ ಹಿಂದೆ ಕುರಿ ಹಟ್ಟಿಗೆ ನುಗ್ಗಿ ಒಂದು ಕುರಿ ಮೇಲೆ ದಾಳಿ ಮಾಡಿತ್ತು. ಇನ್ನೂ ನಾಲ್ಕೈದು ಚಿರತೆಗಳಿವೆ. ಅರಣ್ಯ ಇಲಾಖೆ ಆದಿಕಾರಿಗಳು ಇಲ್ಲಿಯೇ ಕೆಲವು ದಿನಗಳವರೆಗೆ ಬೋನು ಇಡಬೇಕೆಂದು ಗ್ರಾಮಸ್ಥರು ಮತ್ತು ಕುರಿಗಾಯಿಗಳು ಒತ್ತಾಯಿಸಿದ್ದಾರೆ.



