ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಯಶಸ್ವಿಯಾಗಿ ಪಾಸ್ ಮಾಡಿರುವ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಜಾರಿ ಮಾಡಲು ಮುಂದಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶಾದ್ಯಂತ ಎನ್‍ಪಿಆರ್ ನಡೆಸಲು ಒಪ್ಪಿಗೆ ನೀಡಿತು. ಯೋಜನೆ ಜಾರಿಗೆ 8,700 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ.
ಯುಪಿಎ-2 ಸರ್ಕಾರ ಸ್ಥಗಿತಗೊಳಿಸಿದ್ದ ಯೋಜನೆಗೆ ಮರು ಚಾಲನೆ
ಯೋಜನೆಗೆ 8.700 ಕೋಟಿ ಅನುದಾನ
2020 ಏ.1ರಿಂದ ಸೆ.20 ವರೆಗೆ ನೋದಣಿ ಪ್ರಕ್ರಿಯೆ
ಈಗಾಗಲೇ ಕೆಲ ರಾಜ್ಯಗಳು ಎನ್‍ಪಿಆರ್ ವಿರೋಧ
ಅಸ್ಸಾಂನಲ್ಲಿ ಎನ್‍ಪಿಆರ್ ಜಾರಿ ಇಲ್ಲ

ಏಪ್ರಿಲ್ 1, 2020ರಿಂದ ಸೆಪ್ಟೆಂಬರ್ 20, 2020ರವರೆಗೆ ಎನ್‍ಪಿಆರ್ ಪ್ರಕ್ರಿಯೆ ನಡೆಯಲಿದ್ದು, ದೇಶದ ಪ್ರತಿ ಮನೆಗೂ ಗಣತಿದಾರರು ಬಯೋಮೆಟ್ರಿಕ್ ಸಾಧನದ ಜೊತೆ ಬಂದು ದೇಶದ ನಿವಾಸಿಗಳ ಮಾಹಿತಿ ಸಂಗ್ರಹಿಸಲಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಅವಧಿಯ 2010ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಎನ್‍ಪಿಆರ್ ಆರಂಭಿಸಿತ್ತು. ಆದರೆ,ಲ ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಕೇಂದ್ರ ಸರ್ಕಾರ ಮತ್ತೆ ಚಾಲನೆ ನೀಡಿ ದೇಶವ್ಯಾಪಿ ನಡೆಸಲು ಮುಂದಾಗುತ್ತಿದೆ.
ಪಶ್ಚಿಮ ಬಂಗಾಳ ಸರ್ಕಾರ ಅನುಮೋದನೆ ಇಲ್ಲದೇ ಎನ್‍ಪಿಆರ್ ರಾಜ್ಯದಲ್ಲಿ ಜಾರಿ ಮಾಡಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ವೇಳೆ ರಾಷ್ಟ್ರದ ಪ್ರಜೆಯ ದತ್ತಾಂಶ ಸಂಗ್ರಹಕ್ಕೆ ನಾವು ಒಪ್ಪಿಗೆ ನೀಡುವುದಿಲ್ಲ ಎಂದು ಕೇರಳ ಮತ್ತು ರಾಜಸ್ಥಾನ ಸರ್ಕಾರ ಪ್ರಕಟಿಸಿದೆ. ಇನ್ನು ಅಸ್ಸಾಂನಲ್ಲಿ ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ ನಡೆದ ಹಿನ್ನೆಲೆಯಲ್ಲಿ ಈ ರಾಜ್ಯವನ್ನು ಬಿಟ್ಟು ಉಳಿದ ರಾಜ್ಯಗಳಲ್ಲಿ ಎನ್‍ಪಿಆರ್ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಸರ್ಕಾರಿ ಯೋಜನೆ ದುರುಪಯೋಗ ತಪ್ಪಿಸಲು ಮತ್ತು ಆಂತರಿಕ ಭದ್ರತೆಗಾಗಿ ಈ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ.
ದೇಶದಲ್ಲಿ ನಡೆಸುವ ಜನಗಣತಿಗೆ ಪೂರಕವಾದ ಪ್ರಕ್ರಿಯೆಯೇ ರಾಷ್ಟ್ರೀಯ ಜನಸಂಖ್ಯಾ ನೋಂದಣಿ. 1955ರ ಪೌರತ್ವ ಕಾಯ್ದೆ ಮತ್ತು 2003ರ ಪೌರತ್ವ ನಿಯಮದ ಅಡಿಯಲ್ಲಿ ಈ ಗಣತಿ ನಡೆಯಲಿದೆ. ದೇಶದ ಯಾವುದೇ ಪ್ರದೇಶದಲ್ಲಿ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸವಾಗಿರುವವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಬಯೋಮೆಟ್ರಿಕ್ ಯಂತ್ರದ ಮೂಲಕ ಜನರ ಗುರುತು ಪಡೆಯಲಾಗುತ್ತದೆ
ಈ ದತ್ತಾಂಶ ಸಂಗ್ರಹದಲ್ಲಿ ಆಧಾರ್, ಮೊಬೈಲ್ ನಂಬರ್, ಪಾನ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್ ಪೋರ್ಟ್ ನಂಬರ್ ಸಂಗ್ರಹಿಸಲಾಗುತ್ತದೆ.ಹೆಸರು, ಮನೆಯ ಯಜಮಾನನ ಜೊತೆ ಇರುವ ಸಂಬಂಧ, ತಂದೆಯ ಹೆಸರು, ತಾಯಿಯ ಹೆಸರು, ಸಂಗಾತಿಯ ಹೆಸರು,ಲಿಂಗ, ಹುಟ್ಟಿದ ದಿನಾಂಕ, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ವ್ಯಕ್ತಿಯ ಪ್ರಸ್ತುತ ವಿಳಾಸ, ಶಾಶ್ವತ ವಿಳಾಸ, ಶೈಕ್ಷಣಿಕ ಅರ್ಹತೆ, ಉದ್ಯೋಗದ ವಿವರವನ್ನು ನೀಡಬೇಕಾಗುತ್ತದೆ.
.



