ಮುಂಬೈ: ಎನ್‌ಡಿಎ ಮೈತ್ರಿಕೂಟದಲ್ಲಿರುವ ಬಿಹಾರ ಸೇರಿದಂತೆ ದೇಶದ ಎಂಟು ರಾಜ್ಯಗಳು ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆಗಳನ್ನು ಜಾರಿಗೊಳಿಸಲು ನಿರಾಕರಿಸಿವೆ. ಮಹಾರಾಷ್ಟ್ರದಲ್ಲಿಯೂ ಈ ಕಾಯ್ದೆ ಜಾರಿಗೆ ತರಬಾರದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದೇಶದ ಜನರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದು, ಗಂಭೀರ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆ ಜಾರಿಗೆ ತರಲು ಮುಂದಾಗಿದೆ ಎಂದರು.
ಸಿಎಎ ಮತ್ತು ಎನ್ಆರ್‌ಸಿ ಯನ್ನು ಅಲ್ಪಸಂಖ್ಯಾತರು ಮಾತ್ರ ವಿರೋಧಿಸುತ್ತಿಲ್ಲ. ದೇಶದ ಒಗ್ಗಟ್ಟು ಮತ್ತು ಪ್ರಗತಿಯ ಬಗ್ಗೆ ಕಾಳಜಿ ಹೊಂದಿರುವ ಜನರು ಈ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡುತ್ತಿರುವ ಕಾಯ್ದೆಗಳು ದೇಶದ ಕಾನೂನು ವ್ಯವಸ್ಥೆಯನ್ನು ಹಾಳು ಮಾಡಿ, ಸಾಮಾಜಿಕ ಸಾಮರಸ್ಯ ಹದಗೆಡಿಸಲಿದೆ ಎಂದು ತಿಳಿಸಿದರು.



