ಡಿವಿಜಿ ಸುದ್ದಿ, ದಾವಣಗೆರೆ: ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿರುವುದು ಹಾಗೂ ತೆರಿಗೆ ಪಾವತಿ ಪ್ರಮಾಣದಲ್ಲಿ ಕಡಿಮೆ ಮಾಡುವ ಮೂಲಕ ನೌಕರ ವರ್ಗದ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿರುವುದಕ್ಕೆ ವಿತ್ತ ಸಚಿವರಿಗೆ ಧನ್ಯವಾದಗಳು. ಜೊತೆಗೆ ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 3.5 ಲಕ್ಷಕ್ಕೆ ಹೆಚ್ಚಿಸಿರುವುದು ಕೂಡಾ ಸ್ವಾಗತಾರ್ಹ ಎಂದು ಕೆನರಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಐ.ಡಿ.ಬಿ.ಐ ಬ್ಯಾಂಕ್‌ನ್ನು ಮಾರಾಟ ಮಾಡಲು ನಿರ್ಧರಿಸಿರುವುದು ಮತ್ತು ಎಲ್.ಐ.ಸಿ. ಯನ್ನು ಭಾಗಶಃ ಖಾಸಗೀಕರಣಗೊಳಿಸಿರುವುದು ಆಘಾತಕಾರಿಯಾಗಿದೆ. ರಾಷ್ಟ್ರೀಯತೆಗೆ ಒತ್ತು ಕೊಡಬೇಕಾಗಿದ್ದ ಸರಕಾರ ರಾಷ್ಟ್ರೀಕರಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ… ಇದರ ಕುರಿತಾಗಿ ಹೋರಾಟ ಮಾಡಬೇಕಾಗಿದೆ ಎಂದರು
ದೇಶದಲ್ಲಿ ಪ್ರಸ್ತುತ ದಿನಮಾನದಲ್ಲಿ ಇರುವ ಬಹುದೊಡ್ಡ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆಗೆ ಪರಿಹಾರವನ್ನು ನೀಡುವಲ್ಲಿ ಸರಕಾರ ಎಡವಿರುವುದು ಅತ್ಯಂತ ಸ್ಪಷ್ಟವಾಗಿದೆ. ಜೊತೆಗೆ ಬ್ಯಾಂಕುಗಳಲ್ಲಿನ ವಸೂಲಾಗದ ಸಾಲವನ್ನು ವಸೂಲಿ ಮಾಡಲು ಕಠಿಣ ಕಾನೂನು ಕ್ರಮವನ್ನು ರೂಪಿಸದಿರುವುದು ನಿರಾಸೆ ಮೂಡಿಸಿದೆ. ಇದು ಬ್ಯಾಂಕ್‌ನ್ನು ಲೂಟಿ ಮಾಡುತ್ತಿರುವ ಖಾಸಗಿ ಬಂಡವಾಳಷಾಹಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗಿದೆ ಎಂದಿದ್ದಾರೆ.



