ಬೆಳ್ಳಂಬೆಳಿಗ್ಗೆ ಜೋರು ಮಳೆ
ಗುಡುಗು ಸಿಡಿಲ ಆರ್ಭಟ
ನಸುಕಿನ ನಿದ್ದೆಯಿಂದೆನ್ನ ಬಡಿದೆಬ್ಬಿಸಿತು
ನಿತ್ಯಕರ್ಮಂಗಳ ಮುಗಿಸಿ ಹೊರಗೆ ಇಣುಕಿದೆ
ಅಬ್ಬರಿಸಿ ಬೊಬ್ಬಿರಿದು ಇಳೆಯ ತೊಳೆದಿತ್ತು ಮಳೆ
ಕಡೆಯ ಹನಿಗಳುದುರುತ್ತಿದ್ದವು ಚಿಟಪಟ ಅಂತ
ಇಳೆಯೇನೋ ತೊಳೆಯಿತು
ಮಳೆಯ ನೀರಲ್ಲಿ ಕೊರೊನವೂ ಕೊಚ್ಚಿ ಹೋಯಿತೇ? ಏನಾಯಿತು?
ಕೊರೊನಾ ಕೊಚ್ಚಿ ಹೋಗಿರಬೇಕು ಎಂಬ ಭಾವದಲಿ
ಲಾಕ್ ಡೌನ್ ಇದ್ದರೂ ಕೊಡೆ ಹಿಡಿದು ರಸ್ತೆಗಿಳಿದೆ
ರಸ್ತೆಗಳೆಲ್ಲ ನಿರ್ಜನ ಖಾಲಿ ಖಾಲಿ…
ಊರ ರಥಬೀದಿ, ರಾಜಧಾನಿಯ ರಾಜಪಥ ನೆನಪಾದವು
ಮಳೆರಾಯ ರಾಜ ಮಾರ್ಗವ ತೊಳೆದು ಶುಚಿಗೊಳಿಸಿದ್ದ
ವಾಯುದೇವ ಬಿರುಸಾಗಿ ಬೀಸಿ ವೃಕ್ಷಗಳಿಂದೆಲೆ, ಹೂವುಗಳ ಧರೆಗೆ ಚೆಲ್ಲಿದ್ದ
ಸುಳಿಗಾಳಿ ಜಾಜಿ ಮಲ್ಲೆ, ಸಂಪಿಗೆ ಹೂಗಳ ಪರಿಮಳವ ಹೊತ್ತು ಸೂಸುತಲಿತ್ತು
ತಳಿರು ತೋರಣಗಳ ಕಟ್ಟಿ, ಖಗಗಳ ಇಂಚರ ಮೇಳೈಸಿ ಸ್ವಾಗತವೀಯ್ದಿತ್ತು ಪ್ರಕೃತಿ ಮಾತೆ
ರಾಜಪಥದಲಿ ರಥವನ್ನೇರಿ ಹೂಹಾಸಿನ ಮೇಲೆ ಹೊರಟಂತಹ ಅನುಭವ
ದ್ವಿ, ತ್ರಿ, ಷಟ್ ಚಕ್ರ ವಾಹನಗಳ ಗಜಿಬಿಜಿ ಇಲ್ಲ, ದೂಳು ಹೊಗೆಯಂತೂ ಇಲ್ಲವೇ ಇಲ್ಲ…
ಊರಿಗೊಬ್ಳೆ ಪದ್ಮಾವತಿ ಅಂತಾರಲ್ಲ ಹಾಗೆ… ರಸ್ತೆಗೊಬ್ನೆ ರಾಜ ಎಂದು ಹೆಜ್ಜೆ ಹಾಕಿದೆ…
ಪಥಕ್ಕೆ ಅಡ್ಡಲಾಗಿ ಬಿದ್ದಿದ್ದ ಮರದ ಕೊಂಬೆಯೊಂದು ಮುಂದೆ ಸಾಗಬೇಡ ಎಂದಂತಿತ್ತು
ಮಾಲ್ ಮುಂದಿದ್ದ ಕಟೌಟ್ ನೆಲಕ್ಕೆ ತಲೆಯೊರಗಿಸಿ ಅಡ್ಡಡ್ಡ ಮಲಗಿ ರಸ್ತೆ ಬಂದ್ ಮಾಡಿತ್ತು
ಮುಂದೆ ಕೊರೊನಾ ಇದೆ ಎಂದು ಎಚ್ಚರಿಸುವಂತಿತ್ತು
ರಾಜಪಥ ಕೂಡುವ ವೃತ್ತಕ್ಕೆ ಬಂದು ನಿಂತೆ
ಮಳೆಗೆ ಮೈತೊಳೆದು ಸ್ವಚ್ಛ ಸ್ಫುಟವಾಗಿ ಕಾಣುತಲಿತ್ತು ಕೊರೊನಾ!
ನಿನ್ನೆ ಮೊನ್ನೆ ಮಸುಕಾಗಿದ್ದ ಕೊರೊನಾ ಮತ್ತೆ ಮೈಕೊಡವಿ ಎದ್ದು ನಿಂತು ಬಿಟ್ಟಿತೇ ಎಂದು ಪ್ರಶ್ನೆಯೂ ಮೂಡಿತು
ಕಣ್ಣಿಗೆ ಕಾಣದೆ ಗಾಳಿಯಲ್ಲಿ ಹರಿದಾಡುವ
ದೇದ ಹೊಕ್ಕು ಜೀವ ತೆಗೆವ ಈ ಕೊರೊನಾ
ವಿಶಾಲ ವೃತ್ತದಲ್ಲಿ ಮೈ ಹರವಿ ಕಣ್ಣು ಕೋರೈಸುತಲಿತ್ತು
“ರಸ್ತೆಗೆ ಬಂದರೆ ನೀನು
ನಿಮ್ಮ ಮನೆಗೆ ಬರುವೆ ನಾನು”
ಘೋಷ ವಾಖ್ಯವ ಬಿತ್ತರಿಸಿತ್ತು ಆ ಕೊರೊನಾ!!
ಕೊಡೆ ಹಿಡಿದವನೊಬ್ಬ ಆ ಕೊರೊನಾವ ತುಳಿಯುತ್ತಲೇ ಸಾಗಿದ
ಅವನಿಗೆ ಕೊರೊನಾ ಸೋಂಕು ಬಂದೇಬಿಡ್ತಾ ಎಂದುಕೊಂಡೆ
ಕ್ಯಾಮೆರಾದ ದುರ್ಬೀನು ಹಾಕಿ ಪರೀಕ್ಷೆ ಮಾಡೊ ಡಾಕ್ಟರೂ ಆದೆ
ಅಷ್ಟೊತ್ತಿಗೆ ಮಾಸ್ಕ್ ಧರಿಸಿ, ಟೋಪಿ ಹಾಕಿ, ಲಾಠಿ ಹಿಡಿದಿದ್ದ ಪೊಲೀಸಣ್ಣ ಆ ಕೊರೊನಾ ಪಕ್ಕ ಬಂದು ಬೈಕ್ ನಿಲ್ಲಿಸಿ ಡ್ಯೂಟಿಗೆ ಹಾಜರಾದ್ರು
ಮಳೆ, ಹೂವಿನ ಹಾದಿ, ಸುಳಿಗಾಳಿಯ ಕಂಪಿನಲ್ಲಿ, ಹಕ್ಕಿಗಳ ಇಂಚರದ ಮೇಳದಲ್ಲಿ ಮೈ ಮರೆತು ತೇಲುತ್ತಿದ್ದವನಿಗೆ ದಡ್ಗನೆ ಮೈಯಲ್ಲಾ ಕಣ್ಣಾಯಿತು
ಕಾಲಿಗೆ ಬುದ್ಧಿ ಹೇಳಿದೆ ರಾಜಬೀದಿಯಲಿ ಹೋದವ ಸಂದಿಗೊಂದಿ ಬೀದಿಲಿ ಸೂರಿನತ್ತ ನಡೆದೆ
ನಿತ್ಯ ನೂರಾರು ಮಂದಿ ಶುದ್ಧ ಗಾಳಿ ಕುಡಿಯೋಕೆ ಬರ್ತಿದ್ದ ಉದ್ಯಾನಕ್ಕೆ ಬೀಗ ಜಡಿಯಲಾಗಿತ್ತು
ಒಳಗಿದ್ದ ಗಿಡ ಮರ ಬಳ್ಳಿಗಳು ನಳನಳಿಸುತಲಿದ್ದವು
ಕುಡಿ ಮೊಗ್ಗು ಎಲೆಗಳಾ ಮೇಲೆ ಅಮೃತದಾ ಬಿಂದಿಯಂತಿದ್ದವು ಮಳೆ ಹನಿಗಳು
ಹನಿಗಳಿಗೆ ಭಾಸ್ಕರನ ರಶ್ಮಿ ಮುತ್ತಿಕ್ಕಿ ಬೆಳ್ಳಿಯ ನಗು ಚೆಲ್ಲಿತ್ತು
ಅದರರ್ಥ ಹೀಗಿತ್ತು… “ಹೋಗು ಮಂಕೆ ಹೋಗು ಮನೆಗೆ ಹೋಗು… ಮೊದಲು ಜೀವ ಉಳಿಸಿಕೊ, ಉಳಿದದ್ದೆಲ್ಲಾ ಆಮೇಲೆ… ನೀವು ಬಂಧಿ, ನಾವು ಸ್ವಚ್ಛಂದ” ಎಂದು ಕುಹಕವಾಡಿ ಗಹಗಹಿಸಿ ನಗುವಂತಿತ್ತು.
ಸೂರಿನ ಹೊಸ್ತಿಲ ದಾಟಿ ಒಳಹೊಕ್ಕಾಗ ಅನ್ನಿಸಿತು ಹೀಗೆ…
ಜೋರು ಮಳೆಗೆ ಇಳೆ ತೊಳೆಯಿತು; ಕೊರೊನಾ ಕೊಚ್ಚಿ ಹೋಗಲೇ ಇಲ್ಲವೆಂದು!?
-ಜಿ.ಎನ್.ಶಿವಕುಮಾರ, ಬುಳ್ಳಾಪುರ ಮೊ: 94802 25879