ಡಿವಿಜಿ ಸುದ್ದಿ, ಬೆಂಗಳೂರು: ಪೋಸ್ಟ್ ಬಗ್ಗೆ ಪೊಲೀಸರಿಗೆ ದೂರು ನೀಡಿ ಮೂರು ಗಂಟೆ ಕಳೆದರೂ ಕ್ರಮಕೈಗೊಳ್ಳಲಿಲ್ಲ. ನಮ್ಮ ಪಕ್ಷದ ಶಾಸಕರ ಮನೆ ಮೇಲೆ ದಾಳಿ ನಡೆದರೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಲಿಲ್ಲ. ಪೊಲೀಸರು ಸಬೂಬು ಹೇಳಿಕೊಂಡು ಕ್ರಮ ಜರುಗಿಸಲಿಲ್ಲ. ನಮ್ಮ ಶಾಸಕರಿಗೆ ರಕ್ಷಣೆ ಕೊಡಲು ಸರ್ಕಾರದಿಂದ ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. .
ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಮೇಯರ್ ಜೊತೆ ಬುಧವಾರ ಸುಮಾರು ಒಂದು ಗಂಟೆ ಸಭೆ ನಡೆಸಿದ ಬಳಿಕ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಘಟನೆಯ ಹೊಣೆಯನ್ನು ಪೊಲೀಸರು ಹೊರಬೇಕು. ಪೊಲೀಸರಿಂದ ಶಾಸಕರಿಗೆ ರಕ್ಷಣೆ ಇಲ್ಲವೆಂದರೆ, ಇನ್ಯಾರಿಗೆ ಸಿಗುತ್ತದೆ. ಇದು ಬಹಳ ವ್ಯವಸ್ಥಿತ ಸಂಚು. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಕಾನೂನು ಕೈಗೆತ್ತಿಕೊಂಡಿರುವವರ ಮೇಲೆ ಕ್ರಮಕೈಗೊಳ್ಳಬೇಕು. ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ಸರಿಯಲ್ಲ ಎಂದರು.
ಅವಹೇಳಕಾರಿ ಪೋಸ್ಟ್ ಹಾಕಿದ್ದಾನೆ ಎನ್ನಲಾದ ನವೀನ್ ಎಂಬಾತ ಬಿಜೆಪಿಯ ಕಟ್ಟಾ ಬೆಂಬಲಿಗ, ಮತದಾರ. ಆತನಿಗೂ ನಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೂ ಯಾವುದೇ ರಾಜಕೀಯ ಸಂಬಂಧವಿಲ್ಲ. ಡಿಜೆ ಹಳ್ಳಿ ತುಂಬಾ ಸೂಕ್ಷ್ಮ ಪ್ರದೇಶ ಎಂಬುದು ಎಲ್ಲರಿಗೂ ಗೊತ್ತು. ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಎಲ್ಲ ರೀತಿಯ ಸಹಕಾರ ಕೊಡಲು ನಾವು ಸಿದ್ಧವಾಗಿದ್ದೇವೆ. ಆದರೆ, ನಿರಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಡಿ. ಮನೆಯಲ್ಲಿ ಮಲಗಿರುವವರನ್ನು ಬಂಧಿಸಬೇಡಿ. ಬಿಜೆಪಿಯ ಕೆಲವು ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಇದನ್ನು ಗಮನಿಸಬೇಕು. ನಾವು ಯಾರನ್ನೂ ರಕ್ಷಣೆ ಮಾಡಲ್ಲ. ನಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಜೊತೆ ನಾನು ನಿರಂತರ ಸಂರ್ಪಕದಲ್ಲಿದ್ದೇನೆ.
ನಿನ್ನೆ ರಾತ್ರಿ 9 ಗಂಟೆಗೆ ಅವರ ಜೊತೆ ಮಾತಾಡಿದ್ದೇನೆ. ಒಂದು ವೇಳೆ ಶಾಸಕರನ್ನು ಸ್ಥಳಾಂತರಿಸದೇ ಇದ್ದಿದ್ದರೆ ಅವರ ಪ್ರಾಣಕ್ಕೆ ಅಪಾಯ ಉಂಟಾಗುತ್ತಿತ್ತು ಎಂದರು.

ಸರ್ಕಾರದ ನಿರ್ಧಾರಗಳ ಬಗ್ಗೆ ನಾವು ಮಧ್ಯಪ್ರವೇಶ ಮಾಡಲ್ಲ. ಗಲಭೆಗೆ ಪ್ರಚೋದನೆ ಮಾಡಿದವರ ಮೇಲೆ ಕ್ರಮ ಆಗಬೇಕು. ಪ್ರಚೋದನೆ ನೀಡಿದ ಸಂಘಟನೆಯ ಮೇಲೂ ಕ್ರಮ ಆಗಬೇಕು ಎಂದರು.
ಶಾಸಕ ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಬಿ.ಕೆ. ಹರಿಪ್ರಸಾದ್ ಉಪಸ್ಥಿತರಿದ್ದರು.