ಡಿವಿಜಿ ಸುದ್ದಿ, ಬೆಂಗಳೂರು: ಪಾದರಾಯನಪುರದ ಗುಡ್ಡದಹಳ್ಳಿಯಲ್ಲಿ ಭಾನುವಾರ ರಾತ್ರಿ ಬಿಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಮಹಿಳಾ ರೌಡಿ ಸೇರಿ 54 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊರೊನಾ ಸೋಂಕಿತರ ಜೊತೆ ದ್ವಿತೀಯ ಸಂಪರ್ಕದಲ್ಲಿದ್ದರನ್ನು ಕ್ವಾರಂಟೈನ್ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಕ್ವಾರಂಟೈನ್‌ಗೆ ಒಪ್ಪದ ಶಂಕಿತರು ಹಾಗೂ ಅವರ ಕಡೆಯವರು, ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದರು. ರಸ್ತೆಗೆ ಅಡ್ಡವಾಗಿ ಹಾಕಿದ್ದ ತಗಡು, ಬ್ಯಾರಿಕೇಡ್ ಕಿತ್ತು ಹಾಕಿ ಪೆಂಡಾಲ್ ಧ್ವಂಸ ಮಾಡಿದ್ದರು.

ರಾತ್ರಿಯೇ ಸ್ಥಳಕ್ಕೆ ಹೋಗಿದ್ದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಹಲ್ಲೆಯಲ್ಲಿ ಭಾಗಿಯಾದ ಆರೋಪದ ಅಡಿಯಲ್ಲಿ ರೌಡಿಶೀಟರ್ ಫಿರೋಜಾ ಎಂಬ ಮಹಿಳೆ ಸೇರಿ 54 ಮಂದಿಯನ್ನು ಬಂಧಿಸಲಾಗಿದೆ. ಫಿರೋಜಾ, ಸ್ಥಳೀಯವಾಗಿ ಗಾಂಜಾ ಮಾರುತ್ತಿದ್ದಳು. ಗಲಾಟೆಗೆ ಮಹಿಳೆಯೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಬಂಧಿತ ಎಲ್ಲ ಆರೋಪಿಗಳ ಮೇಲೆ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿವೆ.
ಗಲಾಟೆ ವೇಳೆ ಬಹುತೇಕರು ಗಾಂಜಾ ಸೇವಿಸಿದ್ದರು ಎಂಬ ಅನುಮಾನವಿದೆ ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದ್ರ ಮುಖರ್ಜಿ ಹೇಳಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಪಾದರಾಯನಪುರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಘಟನೆ ಸಂಬಂಧ ಜಗಜೀವನರಾಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



