ಡಿವಿಜಿ ಸುದ್ದಿ, ದಾವಣಗೆರೆ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಅವರಿಗೆ 2 ನೇ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ದೂರಿನ ಮೇರೆಗೆ ಲೋಕಿಕೆರೆ ನಾಗರಾಜ್ ಮೇಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ ಯಾಲಯಕ್ಕೆ ಶರಣಾಗಿದ್ದ ಲೋಕಿಕೆರೆ ನಾಗರಾಜ್ ಅವರಿಗೆ ಜಾಮೀನು ಸಿಕ್ಕಿದೆ. ನ.23 ರಂದು ನ್ಯಾಯಾಂಗ ಬಂಧನವಾಗಿತ್ತು.
ಜಾಮೀನಿನ ಮೇಲೆ ಹೊರಬಂದ ಲೋಕಿಕೆರೆ ನಾಗರಾಜ್ ಬೆಂಬಲಿಗರು ವಿದ್ಯಾನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಅವರು, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ವರ್ಗಗಳಿಗೆ ನ್ಯಾಯ ಕಲ್ಪಿಸಲು ಸಂವಿಧಾನ ರಚಿಸಿದ್ದಾರೆ. ಆದರೆ, ಕೆಲವರು ಇದನ್ನು ದುರುಪಯೋಗ ಮಾಡಿಕೊಂಡು ಇನ್ನೊಬ್ಬರನ್ನು ಬಲಿಪಶು ಮಾಡುತ್ತಿದ್ದಾರೆ. ನನ್ನ ಮೇಲೆ ರಾಜಕೀಯ ದ್ವೇಷದಿಂದ ಸುಳ್ಳು
ಮೊಕದ್ದಮೆ ದಾಖಲಿಸಲಾಗಿದ್ದು, ಇದಕ್ಕೆ ಕಾರಣರಾದವರಿಗೆ ಮುಂದಿನ ದಿನಗಳಲ್ಲಿ ಕಾನೂನು ಮೂಲಕವೇ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಾದ ಎಸ್.ಟಿ.ವೀರೇಶ, ಸೋಗಿ ಶಾಂತಕುಮಾರ, ಗೀತಾದಿಳ್ಳೆಪ್ಪ, ಶೋಷಿತ ಹಿಂದುಳಿದ ವರ್ಗಗಳ ಒಕ್ಕೂಟದ ಬಾಡದ ಆನಂದರಾಜ್, ಪಕ್ಷೇತರ ನಗರ ಪಾಲಿಕೆ ಸದಸ್ಯೆ ಸೌಮ್ಯಾ ನರೇಂದ್ರಕುಮಾರ್, ಕತ್ತಲಗೆರೆ ರಾಜಣ್ಣ,ಆವರಗೆರೆ ಕರೇಗೌಡ್ರು, ಆರ್.ಜಿ.ರುದ್ರೇಶ, ಕೆ.ಪಿ.ಕಲ್ಲಿಂಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.



