Connect with us

Dvgsuddi Kannada | online news portal | Kannada news online

ಅಂಕಣ : ಕೋವಿಡ್‌  ಕಾಲದಲ್ಲಿ  ಸಂಪ್ರದಾಯಗಳ ಪಾಲನೆ ಅನಿವಾರ್ಯವೆ?

ಅಂಕಣ

ಅಂಕಣ : ಕೋವಿಡ್‌  ಕಾಲದಲ್ಲಿ  ಸಂಪ್ರದಾಯಗಳ ಪಾಲನೆ ಅನಿವಾರ್ಯವೆ?

-ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ

ದಾವಣಗೆರೆ ಜಿಲ್ಲೆಯ ಒಂದು ಹಳ್ಳಿ . ಮನೆಯೊಂದರಲ್ಲಿ ಮಗುವಿನ ನಾಮಕರಣ ಕುಟುಂಬಕ್ಕೆ ಒಬ್ಬ ಹೊಸ ಸದಸ್ಯನ ಸೇರ್ಪಡೆಯನ್ನು  ಇಡೀ  ಬಂಧು ಬಾಂಧವರಿಗೆ ನಂಟರರಿಷ್ಟರಿಗೆ ಸಾರಿ ಹೇಳಿ ಖುಷಿ ಪಡುವ ಸಂದರ್ಭ. ಸಮಾರಂಭದ ದಿನ ನಂಟರಿಷ್ಟರು ಆಗಮಿಸಿ ಮಗುವನ್ನು ಹರಸಿ, ಉಡುಗೊರೆಗಳನ್ನು ನೀಡಿ, ನೆನಪಿನ ಕಾಣಿಕೆಗಳನ್ನು ಸ್ವೀಕರಿಸಿ  ಉಂಡುಟ್ಟು ಸಂಭ್ರಮಸಿದರು. ಎಲ್ಲರೂ ತಂತಮ್ಮ ಮನೆಗಳಿಗೆ ಆನಂದದಿಂದ ತೆರಳಿದರು.ಆದರೆ ಆ ಆನಂದವು ನೀರಿನ ಮೇಲಿನ ಗುಳ್ಳೆಯಂತೆ ಬಹಳ ಕಾಲ ಉಳಿಯಲಿಲ್ಲ. ಬಂದ ನೆಂಟರಿಷ್ಟರಿಗೂ ಮತ್ತು ಮನೆಯವರಿಗೂ ಕೊರೊನಾ ಸಾರಾಸಗಟಾಗಿ ವಕ್ಕರಿಸಿತು. ಎಲ್ಲರೂ ಆಸ್ಪತ್ರೆಗೆ ದಾಖಲಾದರು. ಮಗುವನ್ನು ನೋಡಿ ಕಣ್ತುಂಬಿಕೊಂಡಿದ್ದ ಮನೆಯ ಯಜಮಾನ ಕಣ್ಣುಚ್ಚಿದ. ಮನೆಗೆ ವಾಪಸು ಬರಲೇ ಇಲ್ಲ. ಮಗುವನ್ನುಮುದ್ದಾಡಲು ಆಗಲಿಲ್ಲ.!

ಚಿಕ್ಕಮಗಳೂರು  ಜಿಲ್ಲೆಯ ಒಂದು ಪಟ್ಟಣ. ಆ ಪಟ್ಟಣದ ಶ್ರೀಮಂತ ಮನೆತನದ ಮಹಿಳೆ ಪ್ರತಿವರ್ಷ ಗೌರಿಹಬ್ಬದ ದಿನ ಸುಮಂಗಲಿಯರನ್ನು ಮನೆಗೆ ಕರೆದು ಬಾಗಿನ ಕೊಡುವ ಪದ್ದತಿಯನ್ನು ಅನೂಚಾನವಗಿ ನಡೆಸಿಕೊಂಡು ಬಂದಿದ್ದಳು. ಪ್ರತಿ ವರ್ಷದ ಪದ್ಧತಿಯಂತೆ ಈ ಸಲವೂ ಬಡಾವಣೆಯ ಆನೇಕ ಮಹಿಳೆಯರನ್ನು ಮನೆಗೆ  ಆಹ್ವಾನಿಸಿದ್ದಳು. ಮನೆಗೆ ಬಂದ ಸುಮಂಗಲಿಯರಿಗೆ ಬಾಗಿನವ ಕೊಟ್ಟು ಹಣೆಗೆ ಕುಂಕುಮ ಇಟ್ಟು ಹಸನ್ಮುಖಳಾಗಿ ಬೀಳ್ಕೊಟ್ಟಳು. ಬಂದವರೆಲ್ಲರೂ ಬಾಗಿನ  ಸ್ವೀಕರಿಸಿ ಆಯುರಾರೋಗ್ಯ ಭಾಗ್ಯ ತುಂಬಿರಲಿ ಎಂದು ಆ ಮಹಿಳೆಯನ್ನು ಹರಸಿ ಹೋಗಿ ಎರಡು ದಿನಗಳೂ ಕಳೆದಿರಲಿಲ್ಲ,ಅದೆಲ್ಲಿ ಹೊಂಚು ಹಾಕಿಕುಂಡು ಕುಳಿತಿತ್ತೋ, ಕೊರೊನಾ ಆ ಮನೆಯ ಮಹಾಲಕ್ಷ್ಮಿಗೇ ವಕ್ಕರಿಸಿತು. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದಾಗ ತನಗೆ ಕೊರೊನಾ ಬಂದಿದೆಯೆಂದು ತಿಳಿದ ಆ ಮಹಿಳೆ ಹೌಹಾರಿ ಪ್ರಾಣವನ್ನೇ ಬಿಟ್ಟಳು!

ಚಿತ್ರದುರ್ಗ ಜಿಲ್ಲೆಯ ಇನ್ನೊಬ್ಬ ಶ್ರೀಮಂತರ ಮನೆಯಲ್ಲಿ ಹುಟ್ಟುಹಬ್ಬ.ಹುಟ್ಟು ಹಬ್ಬ ಆಚರಿಸುವುದು ನಮ್ಮ ದೇಶದ ಸಂಪ್ರದಾಯವಲ್ಲ; ಆದರೆ ಪಾಶ್ಚಿಮಾತ್ಕರ ಪ್ರಭಾವದಿಂದ ನಮ್ಮಲ್ಲೂ ವೈಭವದಿಂದ ಅದನ್ನು ಆಚರಿಸುವ ಸಂಪ್ರದಾಯ ಬೆಳೆದುಬಂದಿದೆ.ವೈಭವದ ಹುಟ್ಟುಹಬ್ಬಆರಿಸಿ, ಕೇಕ್‌ ಕತ್ತರಿಸಿ, ಮೋಂಬತ್ತಿಗಳನ್ನು ಬೆಳಗಿಸಿ  ” Happy Birthday to you”! ಎಂದು  ಹಾಡಿದ್ದಾಯಿತು. ಭರ್ಜರಿಯಾಗಿ ಎರ್ಪಡಿಸಿದ್ದ ಔಣತ ಸವಿದು ಸಂಭ್ರಮಿಸಿದ್ದಾಯಿತು.ಆದರೆ ಆ ಸಂಭ್ರಮ ರಾಹುಗ್ರಸ್ತ ಚಂದ್ರನಂತಾಯಿತು; ಕೇವಲ ಎರಡೇ ದಿನಗಳಲ್ಲಿ ಪಟ್ಟಣದ  ಗಲ್ಲಿ ಗಲ್ಲಿಗಳಲ್ಲಿ ಕೋವಿಡ್‌ ರುದ್ರನರ್ತನ ಆರಂಭಿಸಿತು! ಸಾವು ನೋವುಗಳು ಸಂಭವಿಸಿದವು. ಪಟ್ಟಣ ಸ್ಮಶಾನ ಸದೃಶವಾಯಿತು. ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದೊಡ್ಡತಲೆನೋವು ಬಂದೊದಗಿತು!

ಮಗುವಿಗೆ ನಾಮಕರಣ ಮಾಡುವುದು, ಸುಮಂಗಲಿಯರಿಗೆ ಗೌರಿ ಬಾಗಿನ ಕೊಡುವುದು ಒಳ್ಳೆಯ ಸಂಪ್ರದಾಯಗಳೇ. ಹುಟ್ಟು ಹಬ್ಬ ಆಚರಿಸುವುದು ವಿದೇಶಗಳಿಂದ ಆಮದಾದ ಸಂಪ್ರದಾಯವಾದರೂ ಅದರ ಹಿಂದೆಯೂ ಸದುದ್ದೇಶವೇ ಇದೆ. ನಾಮಕರಣ, ಮಗುವಿಗೆ ತಲೆಗೂದಲು ತೆಗೆಸುವುದು, ಹುಟ್ಟುಹಬ್ಬ, ಮದುವೆ ಮುಂಜಿಗಳು, ಗೃಹಪ್ರವೇಶಗಳು, ಹಬ್ಬ ಹರಿದಿನಗಳು ನಂಟರಿಷ್ಟರೊಂದಿಗೆ ಸಂತೋಷವನ್ನು ಹಂಚಿಕೊಂಡು ಸುಂಭ್ರಮಿಸುವ  ಸಂದರ್ಭಗಳಾದರೆ ಸಾವಿನ ಕಾರಣ ನಡೆಸುವ ಸಮಾರಾಧನೆಗಳು “ನೋವಿನಲ್ಲಿ ನಾವು  ನಿಮ್ಮ ಜೊತೆಗಿದ್ದೇವೆ’ ಎಂದು ದುಃಖಿತರಿಗೆ ಸಾಂತ್ವನ ನೀಡುವ ಸಂದರ್ಭಗಳು.

ಪಾಶ್ಚಿಮಾತ್ಮ ದೇಶಗಳಲ್ಲಿ ಜನರು ಭೇಟಿಯಾದ ಸಂದರ್ಭಗಳಲ್ಲಿ  ಪರಸ್ಪರ ಕೈಕುಲುವುದು ಸಂಪ್ರದಾಯ. ಇನ್ನೂ ಮುಂದುವರೆದು ಅಪ್ಪಿಕೊಳ್ಳುವುದು ಉಂಟು. ಆದರೆ  ಕಳೆದ ಮಾರ್ಚ್ ತಿಂಗಳಿಂದ ಕೊರೊನಾ ಇದಕ್ಕೆ ಕಡಿವಾಣ ಹಾಕಿದೆ.ನಮ್ಮ ದೇಶದಲ್ಲಿರುವ ‘ ನಮಸ್ತೆ’ ಎಂದು ಕೈ ಮುಗಿಯುವ ಸಂಪ್ರದಾಯವನ್ನು ಜಗತ್ತೇ ಅನುಸರಿಸುವಂತೆ ಮಾಡಿದೆ. ಕೆಲವು ತಿಂಗಳ ಹಿಂದೆ ಪ್ರಿನ್ಸ್‌ ಚಾರ್ಲ್ಸ್‌ ಯಾರಿಗೋ ಹಸ್ತಲಾಘವ ಮಾಡಲು ಕೈಚಾಚಿ ನಂತರ ತಕ್ಷಣವೇ ಕೈಯನ್ನು ಹಿಂದಕ್ಕೆ ಸರಿಸಿ ಕೈಮುಗಿದ ದೃಶ್ಯವುಳ್ಳ ವೀಡಿಯೋ ವೈರಲ್‌ ಆಗಿದ್ದು ಓದುಗರಿಗೆ ನೆನಪಿರಬಹುದು. ಇದೇ ರೀತಿ ಇತ್ತೀಚಿಗೆ ಪ್ಯಾರಿಸಗೆ ಭೇಟಿ ನೀಡಿದ ಸಂದರ್ಭದಲ್ಲಿ  ಜರ್ಮನಿಯ ಜಾನ್ಸೆಲರ್‌ ಕೈಮುಗಿಯುತ್ತಿರುವ ಮತ್ತು ಫ್ರಾನ್ಸ್‌ ದೇಶದ ಅಧ್ಯಕ್ಷ ಥೇಟ್‌ ಸನಾತನ ಭಾರತೀಯ ಪದ್ಧತಿಯಂತೆ ತಲೆಬಾಗಿ ಕೈಮುಗಿದು ಬರಮಾಡಿಕೊಳ್ಳತ್ತಿರುವ ದೃಶ್ಯವುಳ್ಳ ವಿಡಿಯೊ ವೈರಲ್‌ ಆಗಿದೆ.ಪರದೇಶಕ್ಕೆ ಹೋದಾಗ ಕೈ ಮುಗಿಯುವುದರ ಬರಲು ಕೈಕುಲುಕುತ್ತಿದ್ದ ನಮ್ಮ  ದೇಶದ ರಾಜಕಾರಣಿಗಳನ್ನು ಮೂದಲಿಸುವಂತಿದೆ.

ಎಲ್ಲ ದೇಶಗಳಲ್ಲೂ ಎಲ್ಲ ಕಾಲಗಳಲ್ಲೂ ನಾನಾ ರೀತಿಯ ಸಂಪ್ರದಾಯಗಳು ಆಚರಣೆಯಲ್ಲಿರುತ್ತವೆ. ಸಂಪ್ರದಾಯಗಳ ಜಗತ್ತು ಬಲು ದೊಡ್ಡದು. ಅವುಗಳನ್ನು ಪ್ರಶ್ನಿಸದೆ ಜನರು  ಆಚರಿಸುತ್ತಾರೆ. ಆದಾಗ್ಯೂ ಮೂಲವನ್ನು ಹುಡುಕುತ್ತಾ ಹೋದರೆ ಅನೇಕ  ಸಂಪ್ರದಾಯಗಳ  ಹಿಂದೆ ವ್ಯಕ್ತ ಮತ್ತು ಸಮಷ್ವಿಯ ಹಿತವೇ ಅಡಗಿರುತ್ತದೆ. ಜನರು ಸಂಪ್ರದಾಯ ಶರಣರಾಗಿರುವುದರಿಂದ ಅವುಗಳ ಪಾಲನೆಯಿಂದ ಮೂಲದ ಆಶಯ ಸಾಧಿತವಾಗುತ್ತದೆ. ಉದಾಹರಣೆಗೆ ಊಟ ಮಾಡಿದ ತಟ್ಟೆಯಲ್ಲಿ ಉಳಿದ ತಿಂಡಿ ತಿನಿಸುಗಳನ್ನು ಬೇರೊಬ್ಬರು ತಿನ್ನಬಾರದು. ಅದು ಎಂಜಲು ಎಂದು ತಿರಸ್ಕಾರದಿಂದ ನೋಡುವ  ಸಂಪ್ರದಾಯ. ಇದು ಜಾರಿಗೆ ಬಂದಿರುವುದರ ಹಿಂದೆ ಆರೋಗ್ಯವನ್ನು ಕುರಿತ ಉದ್ದೇಶವೇ ಅಡಗಿದೆ. ಎಂಜಲಿನ ಮೂಲಕ ಒಬ್ಬರ ಬಾಯಿಂದ ಮತ್ತೊಬ್ಬರ ಜಠರಕ್ಕೆ  ಕೀಟಾಣುಗಳು ಸೇರಬಾರದೆಂಬ ಸದುದ್ದೇಶವೇ ಈ ಸಂಪ್ರದಾಯದ ಹಿಂದಿರುವ ಆಶಯ.

ಸಂಪ್ರದಾಯಗಳನ್ನು ಸ್ಟೂಲವಾಗಿ ಮೂರೂ   ಭಾಗಗಳಾಗಿ ವರ್ಗೀಕರಿಸಬಹುದು:

1.ಆರೋಗ್ಯದ ದೃಷ್ಟಿಯಿಂದ ರೂಢಿಯಲ್ಲಿ ಬಂದ ಸಂಪ್ರದಾಯಗಳು,

2.ವ್ಯಕ್ತಿ ಮತ್ತು ಸಮಾಜದ ಹಿತಕ್ಕಾಗಿ ಜಾರಿಗೆ ಬಂದ ಸಂಪ್ರದಾಯಗಳು

ಮತ್ತು

3.ಅಂಧ ಸಂಪ್ರದಾಯಗಳು.

ಸಂಪ್ರದಾಯಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದೂ ಸಹ ತಪ್ಪೇ, ಆರೋಗ್ಯದ ದೃಷ್ಟಿಯಿಂದ ರೂಢಿಯಲ್ಲಿ ಬಂದವುಗಳು ಮತ್ತು ವ್ಯಕ್ತ ಮತ್ತು ಸಮಾಜದ ಹಿತಕ್ಕಾಗಿ ಜಾರಿಗೆ ಬಂದ ಸಂಪ್ರದಾಯಗಳನ್ನು ಆಚರಣೆಯಲ್ಲಿ ಇಡುವುದು ಒಳ್ಳೆಯದು. ಆದರೆ ಹುರುಳಿಲ್ಲದ ಅಂಧ ಸಂಪ್ರದಾಯಗಳಿಗೆ ಪುಷ್ಟಿ ನೀಡುವುದು ತಪ್ಪು.

ಎಲ್ಲಿಗಾದರೂ ಹೊರಟಾಗ ಬೆಕ್ಕು ಅಡ್ಡ ಬಂದರೆ ಅಪಶಕುನ ಎನ್ನುವ  ಕುರುಡು ನಂಬಿಕೆ ಇದೆ. ವಾಹನ ಚಾಲಕರಂತೂ ಇದಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಬೆಕ್ಕು ಅಡ್ಡ ಬಂದರೆ ಕ್ಷಣಹೊತ್ತು ವಾಹನವನ್ನು ನಿಲ್ಲಿಸಿ ತಮ್ಮ ಮುಂದೆ ಇಟ್ಟುಕೊಂಡಿರುವ ದೇವರ ಫೋಟೋಕ್ಕೆ ಕೈ ಮುಗಿದು ಸಾಧ್ಯವಾದರೆ ಊದುಬತ್ತಿ ಹಚ್ಚಿ ಮುಂದುವರೆಯುತ್ತಾರೆ. ಪಾಪ ಬೆಕ್ಕು ತನ್ನ  ಆಹಾರದ ಅನ್ವೇಷಣೆಯಲ್ಲಿ ಸಾಗಿ ಹೋಗುತ್ತಿರುತ್ತದೆ. ಅದರಿಂದ ದಾರಿಯಲ್ಲಿ ಸಾಗುವವರಿಗೆ  ಏಕೆ ತೊಂದರೆಯಾಗಬೇಕು!  ದಾರಿಯಲ್ಲಿ  ಕ್ಷೌರಿಕ ಎದುರಾದರೆ  ಅಪಶಕುನ ಎನ್ನುವವರನ್ನು ಏನನ್ನಬೇಕು. ಕಾಯಕಶೀಲನಾದ ಕ್ಷೌರಿಕ ಹೇಗೆ ಅಪಶಕುನವಾದನು ಎಂದು ಯೋಚಿಸುವುದೇ ಇಲ್ಲ.ಇಂತಹ ಅಂಧ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೊಗುವುದುದರಲ್ಲಿ ಯಾವ ಅರ್ಥವೂ ಇಲ್ಲ.

ಈ ಹಿನ್ನೆಲೆಯಲ್ಲಿ ಯಲ್ಲಿ ಸಂಪ್ರದಾಯಗಳ ಮೌಲ್ಯಮಾಪನ ಪ್ರಸ್ತುತ ಸಂದರ್ಭದಲ್ಲಿ ತುರ್ತಾಗಿ ಆಗಬೇಕಾಗಿದೆ. ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳು ಜನಸಮುದಾಯದಲ್ಲಿ ಪ್ರೀತಿ ಸೌಹಾರ್ದಗಳನ್ನು ಬೆಳೆಸುತ್ತಾ ಬಂದಿರುವುದು ನಿಜವಾದರೂ ಅವುಗಳ ಆಚರಣೆಯಿಂದ ಈಗ ವ್ಯಕ್ತಿಗತ ಮತ್ತು ಸಾಮಾಜಿಕ ಸಂಕಷ್ಟಗಳು ರಾಗುತ್ತಿರುವುದರಿಂದ ಅವುಗಳನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸುವುದು ವಿಹಿತ. ಸದ್ಯದ ಸತ್‌ ಸಂಪ್ರದಾಯವೆಂದರೆ  ಜನಜಂಗುಳಿ ಸೇರದಂತೆ ಎಚ್ಚರಿಕೆ  ವಹಿಸುವುದು. ಮೂಗು ಬಾಯಿ ಕಣ್ಣುಗಳ ಮೂಲಕ ವೈರಾಣು ಹಬ್ಬದಂತೆ  ಮಾಸ್ಕ್‌ ಧರಿಸುವುದು! ಹಳೆಯ ಸಂಪ್ರದಾಯಗಳನ್ನು ಬದಿಗೊತ್ತಿ. ಈ ಹೊಸ ಸಂಪ್ರದಾಯಗಳನ್ನು ಜಾರಿಗೆ ತರುವುದರಲ್ಲಿಯೇ ವ್ಯಕ್ತಿಯ ಹಿತ ಮತ್ತು ಸಮಾಜದ ಹಿತ ಅಡಗಿದೆ.

ನಮ್ಮ ದೇಶದ ರಾಜಕೀಯ ನೇತಾರರಿಗೆ ಜನಜಂಗುಳಿಯಿಂದ ದೂರವಿರುವುದೆಂದರೆ ನೀರಿನಿಂದ  ಮೀನನ್ನು ದಡಕ್ಕೆ ಎಸೆದಂತೆ ! ಅವರು ಮಾಸ್ಕ್‌ ಧರಿಸುತ್ತಾರೆ. ಆದರೆ ಅದು  ಬಾಯನ್ನೂ ಮುಚ್ಚಿರುವುದಿಲ್ಲ. ಮೂಗನ್ನೂ ಮುಚ್ಚಿರುವುದಿಲ್ಲ; ಕೊರಳಲ್ಲಿ ನೇತಾಡುತ್ತಿರುತ್ತದಷ್ಟೆ ! ಅವರ ಹಿಂದೆ ಜನವೂ ಜನ ! ಸಾಮಾಜಿಕ  ಅಂತರ ಎಂಬುದು ಕೇವಲ ಮರೀಚಿಕೆ. ಹೀಗಾಗಿ ಅವರು ಕೊರೋನಾಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬಂದ ನಂತರವೂ ಅವರು ಪಾಠ ಕಲಿತಿಲ್ಲ. ಪುನಃ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿದ್ದಾರೆ.

ಈಗ ಎಲ್ಲರೂ ಮಾಸ್ಕ್ ಧರಿಸಿ ಜೈನ ಮುನಿಗಳಂತಾಗಬೇಕಿದೆ. ತಮ್ಮ ಬಾಯ ಉಸಿರಿನಿಂದ  ಕ್ರಿಮಿಕೀಟಗಳು ಸಾಯಬಾರದೆಂಬದು ಜೈನ ಮುನಿಗಳ  ವ್ರತವಾದರೆ, ಕೊರೊನಾ ವೈರಾಣುವಿನಿಂದ ಯಾರೂ ಸಾಯಬಾರದೆಂಬುದು ಇಂದಿನ  ಸಾಮಾಜಿಕ ವ್ರತವಾಗಬೇಕಾಗಿದೆ. ಕೊರೊನಾ ತೊಲಗುವ ತನಕ ಹೊಸ ಮನೆ ಕಟ್ಟಿದವರು ತಮ್ಮ ಮನೆಯ ಮಟ್ಟಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಮನೆಯೊಳಗೆ ಸೇರಿಕೊಳ್ಳಿ.ಯಾರಾದರೂ ತೀರಿಕೊಂಡರೆ ನಿಧನರಾದವರ ಭಾವಚಿತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡಿರಿ. ಸಮಾರಾಧನೆ ಮಾಡುವುದು ಬೇಡ, ನಂಟರಿಷ್ಠರನ್ನು ಕರೆದು ದಾಸೋಹ ಏರ್ಪಡಿಸುವುದು ಬೇಡ, ಅದು ತಾವಾಗಿಯೇ ಮೃತ್ಯುವನ್ನು ಆಹ್ವಾನಿಸಿದಂತೆ. ಸಂಪ್ರದಾಯಗಳನ್ನು ಮನೆಯೊಳಗೆ ಆಚರಿಸಿ ಮನದೊಳಗೆ ನೆಲೆಗೊಳಿಸಿಕೊಳ್ಳಿ ಎನ್ನುವ ನಮ್ಮ ಹಿತನುಡಿ  ಸಂಪ್ರದಾಯ ಶರಣರಿಗೆ ಅಪಥ್ಯವಾದರೂ ಶಿಷ್ಯರನೇಕರು ಪಾಲಿಸುತ್ತಿದ್ದಾರೆ. ಸುಪ್ರೀಂಕೋರ್ಟ್‌ ನ್ಯಾಯಾದೀಶರಾದ ಜಸ್ಕೀಸ್‌ ಮೋಹನ್‌ ಶಾಂತನಗೌಡರು ಇತ್ತೀಚೆಗೆ ತಮ್ಮತಾಯಿ ತೀರಿಕೊಂಡಾಗ ಮಾಡಿದ್ದು ಹೀಗೆ. ಸಮಾಧಿಗೆ ಬಂದವರೆಲ್ಲರಿಗೂ ಸಮಾಧಿ ಸ್ಥಳದಲ್ಲಿಯೇ  ಕೈಮುಗಿದು ಹೇಳಿದರು:  “ನಮ್ಮ  ಕುಟುಂಬದ ಸದಸ್ಯರೇ ಮನೆಯಲ್ಲಿ ತಾಯಿಗೆ ಪೂಜೆ ಸಲ್ಲಿಸುತ್ತೇವೆ.ಯಾರೂ ಅನ್ಯಥಾ ಭಾವಿಸಬೇಡಿ”.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡಿದ ಒಂದು ವೀಡಿಯೋ ತುಣುಕು ತುಂಬಾ ಮಾರ್ಮಿಕವಾಗಿದೆ. ಕೊರೊನಾಕ್ಕೆ ತುತ್ತಾಗಿ ಪ್ರಾಣತೆತ್ತು ಒಂದೇ  ಗುಂಡಿಯಲ್ಲಿ ಹೂತು ಹಾಕಿದ್ದ ಇಬ್ಬರು  ಪ್ರೇತಾತ್ಮಗಳ ಪರಿಷ್ಕೃತ ಸಂಭಾಷಣೆ ಹೀಗಿದೆ:

ಪ್ರೇತಾತ್ಮ1 : (ತಲೆ ಚಚ್ಚಿಕೊಂಡು ದುಃಖಿಸುತ್ತಾ): ನಾನೇ ಹೋಗಿ  ಮೈಗೆ ಅಂಟಿಸಿಕೊಂಡು ಬಂದುಬಿಟ್ಟೆ.

ಪ್ರೇತಾತೃ 2: “ಆಯ್ತು ಬಿಡು, ಸತ್ತೆ ಮೇಲೆ ಅಳಬಾರದು’

ಪ್ರೇತಾತ್ಮ 1: (ಬಿಕ್ಕಳಿಸಿ ಅಳುತ್ತಾ) ‘ ಸತ್ತಿದ್ದಕ್ಕೆ ಬೇಜಾರಿಲ್ಲ, ಕೊರೊನಾ ಬಂದು ಸತ್ತಿದ್ದಕ್ಕೆ ಬೇಜಾರಾಗ್ತಿದೆ. ಕೊರೊನಾ ಪಾಸಿಟಿವ್‌ ಅಂತಾ  ಗೊತ್ತಿದ್ ಮೇಲೆ  ನನ್‌ ಹತ್ತಿರ ನನ್‌ ಹೆಂಡತಿ, ಮಗ,ಮಗಳು, ಫ್ರೆಂಡ್ಸು ಸಂಬಂಧಿಕರು. ಯಾರೂ ಬರಲಿಲ್ಲ ಐಸಿಯುನಲ್ಲಿ ಒಂಟಿಯಾಗಿಟ್ಟು ಟ್ರೀಟ್‌ಮೆಂಟ್‌ ಕೊಟ್ರು. ಆದ್ರೂ ನಾನು ಬದುಕಿ ಉಳಿಯಲಿಲ್ಲ. ಸತ್ ಮೇಲೂ ಯಾರು ಬರಲಿಲ್ಲ, ವೀಡಿಯೋ ಕಾಲ್‌ನಲ್ಲಿ ನನ್‌ ಮುಖ ನೋಡ್ಕೊಂಡ್ರು. ಸಾವಿರಾರು ಜನರು ಸೇರಲಿಲ್ಲ. ಪಲ್ಲಕ್ಕಿ, ತೇರು, ತಮಟೆ, ಸಂಪ್ರದಾಯ, ಅಳು ಏನೂ ಇಲ್ಲದೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಯಾರೋ ತಂದು ಜಿಸಿಬಿಯಲ್ಲಿ ಗುಂಡಿ ತೆಗೆದು ಮಣ್ಣಿಗೆ ಎಸೆದು ಹೋಗ್ಬಿಟ್ರು !

ಪ್ರೇತಾತ್ಮ2: ಅಯ್ಯೋ ಅಣ್ಣಾ ಹೆಂಡತಿ, ಮಕ್ಕಳು, ಬಂಧು ಬಳಗ ಅಂತ ಸತ್ತವರಿಗೆ ಯಾರೂ ಇರಲ್ಲ. ಏನ್‌ ಮಾಡೋಕಾಗುತ್ತೆ?  ಸಮಾಧಾನ ಮಾಡ್ಕೊ.

ಪ್ರೇತಾತ್ಮ 1: ಹೇಗಪ್ಪಾ ಸಮಾಧಾನ ಮಾಡಿಕೊಳ್ಳೋದು?ಅನಾಥ ಶವಕ್ಕಾದರೂ ಏನಾದರೂ ಸಂಪ್ರದಾಯ  ಮಾಡ್ತಾರೆ. ನನಗೆ ಏನು ಮಾಡ್ಲಿಲ್ಲ. ಸತ್ತು ಒಂದು ವಾರ ಆಯ್ತು. ಹಾಲು ತುಪ್ಪ ಬಿಡಬೇಕು. ಜನ ಬಂದಿಲ್ಲ ನನಗೆ ಹೇಗೆ ಮುಕ್ತಿ ಸಿಗುತ್ತೆ ಹೇಳು. ಯಾವ ಸಾವು ಬೇಕಾದರೂ ಬರಲಿ, ಕೊರೊನಾ ಸಾವು ಮಾತ್ರ ಯಾರಿಗೂ ಬರಬಾರದು.

ಪ್ರೇತಾತ್ಮ 2: ನಾವು ಸತ್ತದ್ದಾಯಿತು. ಬದುಕಿರೋ ನಮ್ಮ ಗೆಳೆಯರಿಗೆ ಏನಾದರು ಹೇಳು.

ಪ್ರೇತಾತ್ಮ 1: ಬದುಕಿರುವ ಗೆಳೆಯರೇ! ದಯವಿಟ್ಟು ಪೋಲೀಸರು,ಡಾಕ್ಟರು ಮತ್ತು ನರ್ಸ್‌ಗಳ ಮಾತುಕೇಳಿ. ಸಾಬೂನು ಹಚ್ಚಿ ಸರಿಯಾಗಿ ಕೈತೊಳೆದುಕೊಳ್ಳಿ. ಮನೆ ಒಳಗಡೇನೇ ಇರಿ! ಅಡ್ಡಾದಿಡ್ಡಿ ತಿರುಗಾಡಬೇಡಿ.  ಅನಿವಾರ್ಯವಾಗಿ ಹೊರಗೆ ಹೋಗುವಾಗ ಮಾಸ್ಕ್‌ ಹಾಕಿಕೊಳ್ಳಿ.  ಅಂತರ ಕಾಪಾಡಿಕೊಳ್ಳಿ. ನಾನು ಮಾಡಿದ. ತಪ್ಪನ್ನು ನೀವು ಮಾಡಬೇಡಿ. ಇಂಥಾ ಸಾವು ನಿಮಗೆ ಬರೋದು ಬೇಡ. ಜೀವ ಇದ್ರೆ ದುಡಿಬೌದು, ಸುಖಪಡಬೌದು, ತಿಳ್ಕೊಳ್ಳಿ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top