Connect with us

Dvgsuddi Kannada | online news portal | Kannada news online

ಅಂಕಣ: ಬ್ಯಾಂಕ್ ಖಾಸಗೀಕರಣ ದೇಶಕ್ಕೆ ಹಿತಾಸಕ್ತಿಗೆ ಮಾರಕ

ಅಂಕಣ

ಅಂಕಣ: ಬ್ಯಾಂಕ್ ಖಾಸಗೀಕರಣ ದೇಶಕ್ಕೆ ಹಿತಾಸಕ್ತಿಗೆ ಮಾರಕ

  •  ಮುಖ್ಯಾಂಶಗಳು:
  • ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಗಳಿಸುವ ಲಾಭದ ಹಣವು ಜನರ ಅಭ್ಯುದಯಕ್ಕೆ ವಿನಯೋಗವಾಗಬೇಕೇ ಹೊರತು ಖಾಸಗಿ ಬಂಡವಾಳಷಾಹಿಗಳು ಲೂಟಿಗೆ ಅಲ್ಲ.
  • ಬ್ಯಾಂಕ್ ಖಾಸಗೀಕರಣವು ದೇಶದ ಹಿತಾಸಕ್ತಿಗೆ ಮಾರಕವಾಗಲಿದೆ.
  • ದೇಶದ ಅರ್ಥ ವ್ಯವಸ್ಥೆಯ ಜೀವ ನಾಡಿಗಳಾದ ಸಾರ್ವಜನಿಕ ಬ್ಯಾಂಕುಗಳು ಸರಕಾರದ ಅಧೀನದಲ್ಲೇ ನಡೆಯಬೇಕೇ ಹೊರತು ಖಾಸಗಿಯವರಿಂದ ಅಲ್ಲ.
  • ಜನಸಾಮಾನ್ಯರ ಲಕ್ಷಾಂತರ ಕೋಟಿ ರೂಪಾಯಿಗಳ ಠೇವಣಿ ಹಣದ ಭದ್ರತೆಗೆ ಅಪಾಯವಾಗುವ ಸಾಧ್ಯತೆ.
  • ಸರಕಾರದ ಖಾಸಗೀಕರಣ ನೀತಿಯ ವಿರುದ್ಧ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಸಾರ್ವಜನಿಕರ ಬೆಂಬಲವೂ ಅತ್ಯಗತ್ಯ.

ಸಾರ್ವಜನಿಕ ಕ್ಷೇತ್ರದ ಕೆಲ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆಯನ್ನು 4 ಅಥವಾ 5 ಕ್ಕೆ ಇಳಿಸುವುದಾಗಿ  ಕೇಂದ್ರ ಸರಕಾರ ಇತ್ತೀಚೆಗೆ ಹೇಳಿಕೊಂಡಿದೆ‌. ಇದು ಈ ದೇಶಕ್ಕೆ, ಈ ದೇಶದ ಬ್ಯಾಂಕುಗಳಿಗೆ ಮತ್ತು ಈ ದೇಶದ ಜನಸಾಮಾನ್ಯರಿಗೆ ಆಘಾತವನ್ನುಂಟು ಮಾಡಿದೆ. ಏಕೆಂದರೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗಿಯವರಿಗೆ ಮಾರುವುದರಿಂದ ದೇಶದ ಆರ್ಥಿಕ ವ್ಯವಸ್ಥೆಯ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾಗಲಿದೆ‌. ಜೊತೆಗೆ ಲಕ್ಷಾಂತರ ಕೋಟಿಯ ಪ್ರಮಾಣದಲ್ಲಿರುವ ಜನತೆಯ ಠೇವಣಿ ಹಣದ ಭದ್ರತೆಯ ಕುರಿತಾಗಿ ಠೇವಣಿದಾರರಿಗೆ ಆತಂಕದ ವಾತಾವರಣ ಸೃಷ್ಠಿಯಾಗಿದೆ‌.

ಇದಕ್ಕಿಂತಲೂ ದುರ್ದೈವದ ವಿಷಯವೆಂದರೆ ದೇಶದಲ್ಲಿ ನಡೆಯುತ್ತಿರುವ ಸರಕಾರದ ಈ ಕೆಟ್ಟ ನೀತಿಯ ವಿರುದ್ಧ ವಿರೋಧ ಪಕ್ಷಗಳನ್ನು ಒಳಗೊಂಡಂತೆ ಯಾವುದೇ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಮಾಧ್ಯಮ ವಲಯದವರು,  ವಿಚಾರವಾದಿಗಳು, ಆರ್ಥಿಕ ತಜ್ಞರು, ಲೇಖಕರು-ಅಂಕಣಕಾರರು, ಹೋರಾಟಗಾರರು, ಜನಸಾಮಾನ್ಯರು ತುಟಿ ಬಿಚ್ಚದೇ, ವಿರೋಧವನ್ನು ವ್ಯಕ್ತಪಡಿಸದೇ, ಪ್ರತಿಭಟನೆಯನ್ನು ತೋರಿಸದೇ ಇರುವಂತದ್ದು. ಬ್ಯಾಂಕ್ ನೌಕರ ಸಂಘಟನೆಗಳ ಪೈಕಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ಮಾತ್ರ ತನ್ನ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದೆ ಮತ್ತು ಹೋರಾಟವನ್ನು ರೂಪಿಸುತ್ತಿದೆ. ಇನ್ನೆಲ್ಲ ಸಂಘಟನೆಗಳು ಮೌನವಾಗಿ ಸರಕಾರದ ದೇಶವಿರೋಧಿ ನೀತಿಯನ್ನು ಒಪ್ಪಿಕೊಂಡಂತೆ ಗೋಚರಿಸುತ್ತಿದೆ. ಬ್ಯಾಂಕ್ ರಾಷ್ಟ್ರೀಕರಣ ನೀತಿಯನ್ನೇ ತಲೆ ಕೆಳಗಾಗಿಸುವ ಈ ಹುನ್ನಾರ ಖಂಡಿತವಾಗಿಯೂ ನಮ್ಮ ದೇಶಕ್ಕೆ ಮಾರಕ.

ಸುಮಾರು 51 ವರ್ಷಗಳ ಹಿಂದೆ ಅಂದರೆ 1969ರಲ್ಲಿ ಖಾಸಗಿ ವ್ಯಕ್ತಿಗಳ/ಸಂಸ್ಥೆಗಳ ಬಿಗಿ ಮುಷ್ಠಿಯಲ್ಲಿದ್ದ ನಮ್ಮ ದೇಶದ ಪ್ರಮುಖ 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. 1969ರವರೆಗೆ ಖಾಸಗಿ ವಲಯದಲ್ಲಿದ್ದ ಬಹುತೇಕ ಬ್ಯಾಂಕುಗಳ ಮಾಲೀಕರು ದೇಶದ ಆರ್ಥಿಕ ಬೆಳವಣಿಗೆಯ ಕುರಿತಾಗಿ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿರಲಿಲ್ಲ. ಈ ಬಂಡವಾಳಷಾಹಿಗಳು ತಮ್ಮ ಕೈಗಾರಿಕೆಗಳ ಅಗತ್ಯಗಳಿಗೆ ಮತ್ತು ತಮಗೆ ಬೇಕಾದವರಿಗೆ ಮಾತ್ರ ಬ್ಯಾಂಕುಗಳಲ್ಲಿದ್ದ ಜನರ ಠೇವಣಿ ಹಣವನ್ನು ಬಳಸುತ್ತಿದ್ದರು. ಬ್ಯಾಂಕುಗಳಲ್ಲಿರುವ ಅಗಾಧ ಪ್ರಮಾಣದ ಠೇವಣಿ ಹಣ ಜನಸಾಮಾನ್ಯರಿಗೆ ಸೇರಿರುವಂತದ್ದು ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಮತ್ತು ಇದೇ ಠೇವಣಿ ಹಣದ ಮುಖಾಂತರ ಬ್ಯಾಂಕುಗಳು ಗಳಿಸುವ ಲಾಭದ ಹಣವನ್ನು ಈ ದೇಶದ ಜನಸಾಮಾನ್ಯರ ಅಭ್ಯುದಯಕ್ಕಾಗಿ ವಿನಿಯೋಗಿಸಬೇಕೇ ಹೊರತು ಖಾಸಗಿ ವ್ಯಕ್ತಿಗಳ ಲೂಟಿಗಾಗಿ ಅಲ್ಲ ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅತ್ಯಂತ ಸ್ಪಷ್ಟವಾದ ನಿಲುವಾಗಿದೆ ಮತ್ತು ಅದಕ್ಕಾಗಿ ಹೋರಾಟವನ್ನು ಮಾಡಲಾಗುತ್ತಿದೆ‌.

ರಾಷ್ಟ್ರೀಕರಣವಾದ ನಂತರದಲ್ಲಿ ಬ್ಯಾಂಕುಗಳು ಅಭೂತಪೂರ್ವವಾಗಿ ಬೆಳವಣಿಗೆಯನ್ನು ಕಂಡಿವೆ‌. ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗೆ, ಜನರ ಆರ್ಥಿಕ ಸ್ವಾವಲಂಬನೆಗೆ ಕಾರಣೀಭೂತವಾಗಿದೆ‌. ಪ್ರಸ್ತುತ ಬ್ಯಾಂಕುಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಠೇವಣಿ ಹಣವಿದೆ‌.  ಈ ಠೇವಣಿ ಹಣವನ್ನು ನಮ್ಮ ದೇಶದ ಕೈಗಾರಿಕೋಧ್ಯಮದ ಬೆಳವಣಿಗೆಗೆ, ಸಾರಿಗೆ-ಸಂಪರ್ಕದ ಸ್ಥಾಪನೆಗೆ, ಕೃಷಿ-ನೀರಾವರಿ, ಸಣ್ಣ-ಮದ್ಯಮ ಗಾತ್ರದ ಕೈಗಾರಿಕೆಗಳ ಬೆಳವಣಿಗೆಗೆ, ಶಿಕ್ಷಣ ಪಡೆಯಲು ಮತ್ತು ಜನ ಸಾಮಾನ್ಯರು ಸ್ವ ಉದ್ಯೋಗ ಕಲ್ಪಿಸಿಕೊಳ್ಳುವಂತಹ ಮಹತ್ಕಾರ್ಯಗಳಿಗೆ ಬಳಸಲಾಗುತ್ತಿದೆ‌. ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಜೀವ ನಾಡಿಯಂತೆ ಕಾರ್ಯ ನಿರ್ವಹಿಸುತ್ತಿವೆ ಈ ರಾಷ್ಟ್ರೀಕೃತ ಬ್ಯಾಂಕುಗಳು.ಈಗಿನ ಕೇಂದ್ರ ಸರಕಾರ ತಮ್ಮದೇ ಆದ ಉದ್ದೇಶಗಳಿಗಾಗಿ ನಮ್ಮ ದೇಶದ ಸಾರ್ವಜನಿಕ ಕ್ಷೇತ್ರದಲ್ಲಿ ಇರುವಂತಹ ಕೈಗಾರಿಕೆಗಳು, ಬ್ಯಾಂಕುಗಳು, ವಿಮಾ ಸಂಸ್ಥೆಗಳು, ರೈಲ್ವೇ, ಭಾರತೀಯ ಸಂಚಾರ ನಿಗಮ, ಏರ್ ಇಂಡಿಯಾ ಮುಂತಾದ ಹಲವಾರು ಪ್ರಮುಖ ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಉದ್ದೇಶಿಸಿದೆ‌. ಈ ಆಸ್ತಿಗಳನ್ನು ಮಾರಲು ಈಗಿನ ಸರಕಾರಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಈ ಎಲ್ಲ ಸಂಸ್ಥೆಗಳು ದೇಶದ ಜನಸಾಮಾನ್ಯರ ಶ್ರಮದಿಂದ, ಬೆವರಿನ ಪ್ರತಿಫಲವಾಗಿ ಸ್ಥಾಪನೆಯಾಗಿವೆ ಮತ್ತು ಬೆಳವಣಿಗೆಯನ್ನು ಕಂಡಿವೆ.

ಖಾಸಗಿ ಕ್ಷೇತ್ರದ ಬ್ಯಾಂಕುಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ಸರಕಾರ ಹೇಳುತ್ತಿದೆ‌. ಆದರೆ ನಿಜವಾದ ಸಂಗತಿಯೆಂದರೆ ಈ ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳ ಮಾಲೀಕರು ಹಲವು ಬ್ಯಾಂಕುಗಳನ್ನು ಲೂಟಿ ಮಾಡಿದ್ದರಿಂದ ಆ ಲೂಟಿಗೊಳಗಾದ ಬ್ಯಾಂಕುಗಳನ್ನು ಮತ್ತು ಆ ಬ್ಯಾಂಕುಗಳ ಗ್ರಾಹಕರನ್ನು ರಕ್ಷಿಸುವ ಕೆಲಸವನ್ನು ನಮ್ಮ ಹೆಮ್ಮೆಯ ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿವೆ ಎನ್ನುವುದನ್ನು ಸರಕಾರ ಮರೆಯಬಾರದು ಮತ್ತು ಸಾರ್ವಜನಿಕರಿಗೆ ಇದನ್ನು ಮುಕ್ತವಾಗಿ ತಿಳಿಸಬೇಕು. ಸಾರ್ವಜನಿಕ ಬ್ಯಾಂಕುಗಳಲ್ಲಿ ಕ್ಲುಪ್ತ ಸಮಯದಲ್ಲಿ ವಸೂಲಾಗದ ಸಾಲದ ಪ್ರಮಾಣ (NON PERFORMING ASSETS) ಅತೀ ಹೆಚ್ಚಿದೆ ಎನ್ನುತ್ತಿದೆ‌. ಹಾಗಿದ್ದರೆ ಇದಕ್ಕೆ ಕಾರಣರಾರು? ಜನಸಾಮಾನ್ಯರೇ? ಬ್ಯಾಂಕುಗಳ ಠೇವಣಿದಾರರೇ? ಈ ಪರಿಸ್ಥತಿಗೆ ನಿಶ್ಚಿತವಾಗಿಯೂ ಅತೀ ದೊಡ್ಡ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡದಿರುವ ಬೃಹತ್ ಖಾಸಗಿ ಬಂಡವಾಳಷಾಹಿಗಳು ಮತ್ತು  ಕೇಂದ್ರ ಸರಕಾರದ ನೀತಿಗಳೇ ಕಾರಣ ಎನ್ನುವುದನ್ನು ಯಾರೂ ಮರೆಯುವಂತಿಲ್ಲ‌.

ಬ್ಯಾಂಕುಗಳ ಇಂದಿನ ಸ್ಥಿತಿಗೆ ಆಳುವ ವರ್ಗದ ರಾಜಕಾರಣಿಗಳ ಕುಮ್ಮಕ್ಕು ಇದೆ ಎನ್ನುವುದನ್ನು ನಾವು ಮನಗಾಣಬೇಕು. ಸಾಲ ವಸೂಲಾತಿ ವಿಷಯದಲ್ಲಿ ಸರಕಾರ ಬಿಗಿಯಾದ ಕ್ರಮವನ್ನು ಕೈಗೊಂಡಲ್ಲಿ ಸಾಲ ವಸೂಲಾತಿಗೆ ಯಾವುದೇ ಸಮಸ್ಯೆಯಿಲ್ಲ. ಇನ್ನೊಂದೆಡೆ ಸರಕಾರವು ರಾಷ್ಟ್ರೀಕ್ರತ ಬ್ಯಾಂಕುಗಳು ನಷ್ಟದಲ್ಲಿವೆ ಎಂದು ಹೇಳಿಕೊಳ್ಳುತ್ತಿದೆ‌. ವಸೂಲಾಗದ ಸಾಲವನ್ನು ಬ್ಯಾಂಕುಗಳು ಗಳಿಸುವ ಲಾಭದಿಂದ ವಜಾ ಮಾಡಲಾಗುತ್ತಿರುವುದರಿಂದ ಈ ಪರಿಸ್ಥಿತಿ ಬಂದಿದೆ‌. ಬ್ಯಾಂಕುಗಳ ಲೆಕ್ಕ ಪತ್ರವನ್ನು ಅವಲೋಕಿಸಿದರೆ ಇದು ತಿಳಿಯುತ್ತದೆ‌. ಆರ್ಥಿಕ ಬಲಾಡ್ಯರು, ರಾಜಕೀಯ ಹಿನ್ನಲೆಯ ಬಲಾಡ್ಯರಿಂದ ಸಾಲವನ್ನು ವಸೂಲಾತಿ ಮಾಡದೇ ಬಡ್ಡಿ ಮನ್ನಾ, ಸಾಲವನ್ನೇ ಮನ್ನಾ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಬ್ಯಾಂಕುಗಳು ಮೊದಲಿಂದಲೂ ಒಳ್ಳೆಯ ಲಾಭವನ್ನು ಗಳಿಸುತ್ತಿವೆ‌. ಆದರೆ ಸರಕಾರದ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳ ಕೆಟ್ಟ ನೀತಿಯಿಂದಾಗಿ ಬ್ಯಾಂಕುಗಳು ಅನಿವಾರ್ಯವಾಗಿ ನಷ್ಟವನ್ನು ದಾಖಲಿಸಬೇಕಾಗಿದೆ‌.

ಬ್ಯಾಂಕುಗಳಿಗೆ ಅಗತ್ಯ ಬಂಡವಾಳವನ್ನು ನೀಡಲು ತನ್ನ ಬಳಿ ಹಣವಿಲ್ಲ ಎಂದು ಸರಕಾರ ಒಂದೆಡೆ ಹೇಳುತ್ತಿದೆ‌. ಬ್ಯಾಂಕುಗಳಲ್ಲಿ ದುಬಾರಿ ಬಂಡವಾಳವಿರಬೇಕೆಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಒಂದೆಡೆ ಷರತ್ತುಗಳನ್ನು ಹಾಕುತ್ತಿವೆ‌. ನಮ್ಮ ದೇಶದ ಬ್ಯಾಂಕುಗಳಿಗೆ ಆ ತೆರನಾದ ಅಗಾಧ ಪ್ರಮಾಣದ ಅಗತ್ಯ ಖಂಡಿತವಾಗಿಯೂ ಬೇಕಾಗಿಲ. ಸರಕಾರ ಇದರ ಬಗ್ಗೆ ಅಗತ್ಯವಾದ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು. ಠೇವಣಿದಾರರಿಗೆ ನಮ್ಮ ದೇಶದ ಸಾರ್ವಜನಿಕ ಬ್ಯಾಂಕುಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ‌. ಆದರೆ ಈ ವಿಶ್ವಾಸ ಖಾಸಗಿ ಬ್ಯಾಂಕುಗಳ ಮೇಲಿಲ್ಲ. ಇನ್ನೊಂದು ಪ್ರಮುಖವಾದ ವಿಷಯವೆಂದರೆ ಕೇಂದ್ರ ಸರಕಾರದ ಎಲ್ಲ ಆರ್ಥಿಕ ಯೋಜನೆಗಳನ್ನು ಮತ್ತು ನೀತಿಗಳನ್ನು ಕಾರ್ಯಗತಗೊಳಿಸುವುದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಮಾತ್ರ‌.

ಇಂತಹ ಮಹತ್ವದ ಸೇವೆಗಳನ್ನು ಬ್ಯಾಂಕುಗಳು ಯಾವುದೇ ಶುಲ್ಕವಿಲ್ಲದೇ ಮಾಡುತ್ತಿವೆ‌. ಆದರೆ ಇದೇ ಸೇವೆಯನ್ನು ಖಾಸಗಿ ಬ್ಯಾಂಕುಗಳಿಂದ ನಿರೀಕ್ಷಿಸಲು ಸಾಧ್ಯವೇ? ಖಾಸಗಿ ಬ್ಯಾಂಕುಗಳ ಮೂಲ ಉದ್ದೇಶ ಲಾಭ ಮಾಡುವುದೇ ಹೊರತು ಸೇವಾ ಉದ್ದೇಶವಿಲ್ಲ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ದೇಶದ ಆಮೂಲಾಗ್ರ ಬೆಳವಣಿಗೆಗೆ ಸಹಕಾರ ನೀಡಿದೆ‌. ದೇಶದ ಕಷ್ಟದ ಸಂದರ್ಭದಲ್ಲೆಲ್ಲ ದೇಶದೊಂದಿಗೆ ನಿಂತಿದೆ‌. ಇಂತಿರುವಾಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸರಕಾರ ಅಗತ್ಯವಿರುವ ಬಂಡವಾಳ ನೀಡಲೇಬೇಕು. ಇಲ್ಲಿಯವರೆಗೆ ಬ್ಯಾಂಕುಗಳು ನೀಡಿರುವ ಸೇವೆ, ಸರಕಾರಕ್ಕೆ ನೀಡಿರುವ ಲಾಭಾಂಶ, ಡಿವಿಡೆಂಡ್ ಗಳನ್ನು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ‌… ದೇಶದ ಕಷ್ಟದ ಸಂದರ್ಭದಲ್ಲಿ ದೇಶದ ಜೊತೆಗೆ ನಿಂತಿರುವ ಬ್ಯಾಂಕುಗಳ ಜೊತೆಗೆ ಈಗಿನ ಪ್ರತಿಕೂಲದ ಸಂದರ್ಭದಲ್ಲಿ ಬ್ಯಾಂಕುಗಳ ಜೊತೆಗೆ ನಿಲ್ಲಬೇಕಾದದ್ದು ಸರಕಾರದ ಜವಾಬ್ದಾರಿಯಲ್ಲವೇ?

ಈಗಿನ ಕೇಂದ್ರ ಸರಕಾರದ ಮುಖ್ಯ ಉದ್ದೇಶ ಕಾರ್ಪೋರೇಟರ್ ಗಳಿಗೆ ನೆರವು ಕೊಡುವುದಾಗಿದೆ‌. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ‌. ಅವರ ಹಿತಕ್ಕಾಗಿ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಬಲಿ ಕೊಡಲಾಗುತ್ತಿದೆ‌. ಜೊತೆಗೆ ವಿದೇಶಿ ಬಂಡವಾಳಷಾಹಿಗಳಿಗೂ ರತ್ನಗಂಬಳಿಯನ್ನು ಹಾಸಿ ಸ್ವಾಗತಿಸಿ ಸಹಕಾರ ನೀಡಲಾಗುತ್ತಿದೆ‌. ದೇಶದ ಆಸ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿರುವಂತೆ ಕಾಣಿಸುತ್ತಿಲ್ಲ. ಬ್ಯಾಂಕ್ ಖಾಸಗೀಕರಣದ ನಡೆ ನಮ್ಮ ಆರ್ಥಿಕ ಸ್ವಾವಲಂಬನೆಗೆ, ದೇಶದ ಸಾರ್ವಭೌಮತ್ವಕ್ಕೆ ದೊಡ್ಡ ಹೊಡೆತ ನೀಡುವುದರಲ್ಲಿ ಸಂಶಯವಿಲ್ಲ. ಬಡವರಿಗೆ, ಜನಸಾಮಾನ್ಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ, ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಇನ್ನು ಮುಂದೆ ಸಾಲ ಸಿಗುವುದು ಒತ್ತಟ್ಟಿಗಿರಲಿ ಬ್ಯಾಂಕುಗಳ ಒಳಗೆ ಪ್ರವೇಶವೂ ಕಷ್ಟಸಾಧ್ಯವಾಗುವ ಎಲ್ಲ ಸಾಧ್ಯತೆಗಳೂ ಇವೆ‌. ಜೊತೆಗೆ ಠೇವಣಿ ಹಣವೂ ಲೂಟಿಯಾಗುವ ಅತೀ ದೊಡ್ಡ ಅಪಾಯವೂ ಇದೆ‌.

ಸರಕಾರದ ಈ ಖಾಸಗೀಕರಣ ನೀತಿಯನ್ನು ಪಕ್ಷ ಬೇಧವಿಲ್ಲದೇ ಸಾರ್ವಜನಿಕರು ವಿರೋಧಿಸಬೇಕು. ಸಾರ್ವಜನಿಕ ಕ್ಷೇತ್ರದ ಉಳಿವಿಗಾಗಿ ದೇಶದ ಜನತೆ ಒಗ್ಗಟ್ಟಾಗಿ ಚಳುವಳಿ ಮಾಡಬೇಕಾಗಿದೆ ಮತ್ತು ಈ ಕುರಿತಾಗಿ ಜನ ಜಾಗೃತಿ ಅಭಿಯಾನವನ್ನು ನಡೆಸಬೇಕಾಗಿದೆ‌.‌ ರಾಷ್ಟ್ರೀಕರಣ ಬ್ಯಾಂಕಿಂಗ್ ವ್ಯವಸ್ಥೆಗಾಗಿ 60 ರ ದಶಕದಲ್ಲಿ ಹೋರಾಡಿದ್ದ ಏಕೈಕ ಬ್ಯಾಂಕ್ ನೌಕರರ ಸಂಘಟನೆಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಇದು ಅದರ ಉಳಿವಿಗಾಗಿ ಹಲವಾರು ರೀತಿಯ ಹೋರಾಟವನ್ನು ಮಾಡುತ್ತಿದೆ. ಕೋವಿಡ್19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಷ್ಕರವನ್ನು ಸಂಘಟಿಸಲು ಸಾಧ್ಯವಾಗುತ್ತಿಲ್ಲ. ಈ ಹೋರಾಟದ ಹಿಂದಿರುವ ಕಾಳಜಿಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬ ದೇಶವಾಸಿಗಳು ಬೆಂಬಲಿಸಬೇಕಾಗಿದೆ. ಇದು ನಮ್ಮ ದೇಶದ ಹಿತಾಸಕ್ತಿಗಾಗಿ ನಡೆಸುತ್ತಿರುವ ದೇಶಪ್ರೇಮಿ ಹೋರಾಟವಾಗಿದೆ.

ಲೇಖಕರು: ಕೆ‌.ರಾಘವೇಂದ್ರ ನಾಯರಿ. ಮೊ:9844314543, ಮಾಹಿತಿ ಕೃಪೆ: ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಷನ್.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top