ಡಿವಿಜಿ ಸುದ್ದಿ, ಬೆಂಗಳೂರು: ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ಬಗ್ಗೆ ರೈತರಲ್ಲಿ ಗೊಂದಲ ಬೇಡ. ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ, ಮಾರಾಟ ಮಾಡಲು ಈ ಕಾಯ್ದೆ ಅನುವು ಮಾಡಿಕೊಟ್ಟಿದೆ. ರೈತರಿಗೆ ತಾವು ಬೆಳೆದ ಬೆಳೆಯ ನೇರ ಲಾಭ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಕಾಯ್ದೆ ವಿರುದ್ಧ ಅಪಪ್ರಚಾರ ಮಾಡಿ ನಮ್ಮ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ರೈತರ ಹಿತಕ್ಕೆ ಧಕ್ಕೆ ಬರುವುದಾದರೆ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವುದಿಲ್ಲ ಎಂದರು.
ನನ್ನ ಬೆಳೆ ನನ್ನ ಹಕ್ಕು ಎಂಬುದು ರೈತನ ಮಂತ್ರವಾಗಬೇಕು. ಈ ಕಾಯ್ದೆಯಿಂದ ರೈತರೇ ಮೊದಲು ಎಂಬ ಘೋಷವಾಕ್ಯ ಸಾಧ್ಯವಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಸಿಗುತ್ತದೆ. ಈ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಸೀಮಿತಗೊಳಿಸಿ ರೈತರು ಉತ್ತಮ ಧಾರಣೆ ಪಡೆಯಲು ಅವಕಾಶ ಒದಗಿಸಿದೆ. ಆ ಮೂಲಕ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಮಾರುಕಟ್ಟೆ ಒದಂತಾಗಿದೆ.
ಎಪಿಎಂಸಿ ಕಾಯ್ದೆಯನ್ನೇ ನಾವು ತೆಗೆದು ಹಾಕಿಲ್ಲ. ಕೇವಲ ಕಾಯ್ದೆಯ ಎರಡು ಸೆಕ್ಷನ್‌ಗಳಿಗೆ ತಿದ್ದುಪಡಿ ಮಾಡಿದ್ದೇವೆ. ಈ ಸುಧಾರಣೆಯ ಉದ್ದೇಶ- ನಮ್ಮ ರೈತರಿಗೆ ಮಾರುಕಟ್ಟೆಯ ಹೆಚ್ಚಿನ ಆಯ್ಕೆಗಳು ಲಭಿಸಲಿವೆ. ನಮ್ಮ ರೈತರು ಎಪಿಎಂಸಿ ಯಾಗಲೀ ಅಥವಾ ಇತರೇ ವರ್ತಕರ ಅಧೀನಕ್ಕೆ ಒಳಪಡುವುದಿಲ್ಲ. ಬೆಂಬಲ ಬೆಲೆಗೆ ಕಡಿಮೆ ದರದಲ್ಲಿ ಖರೀದಿ ಮಾಡುವ, ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ. ಇನ್ನು ಮುಂದೆ ಎಪಿಎಂಸಿಯಲ್ಲಿ ವ್ಯವಹಾರ ಮಾಡುವ ವರ್ತಕರು ರೈತರನ್ನು ಶೋಷಣೆ ಮಾಡುವುದು ತಪ್ಪುತ್ತದೆ ಎಂದರು.



