ದಾವಣಗೆರೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಎಚ್. ಕಲ್ಪನಹಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆ ಶಿಕ್ಷಕಿ ಜ್ಯೋತಿ (43) ಮತ್ತು ಪವಾಡರಂಗವ್ವನಹಳ್ಳಿಯ ಮಂಜುನಾಥ್ (68) ಎಂಬುವರು ಮೃತರಾಗಿದ್ದಾರೆ.
ಶಿಕ್ಷಕಿ ಜ್ಯೋತಿ ಅವರ ಪತಿಗೆ ಹೃದಯಾಘಾತ ಸಂಭವಿಸಿತ್ತು. ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಆಂಬುಲೆನ್ಸ್ ಮೂಲಕ ಕರೆತರಲಾಗುತ್ತಿತ್ತು. ಆಂಬುಲೆನ್ಸ್ ಚಾಲಕ ಟ್ರ್ಯಾಕ್ಟರ್ ಹಿಂದಿಕ್ಕಲು ಯತ್ನಿಸಿದ್ದಾನೆ. ಆಗ ಟ್ರ್ಯಾಲಿಗೆ ಆಂಬುಲೆನ್ಸ್ ರಭಸವಾಗಿ ಡಿಕ್ಕಿಯಾಗಿದೆ. ಈ ವೇಳೆ ಆಂಬುಲೆನ್ಸ್ನಲ್ಲಿದ್ದ ಶಿಕ್ಷಕಿ ಜ್ಯೋತಿ ಅವರ ತಲೆಗೆ ಬಲವಾದ ಪೆಟ್ಟಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಅವರನ್ನು ಮತ್ತೊಂದು ಆಯಂಬುಲೆನ್ಸ್ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ರಭಸಕ್ಕೆ ಗಾಬರಿಗೊಂಡು ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ದಾವಣಗೆರೆಗೆ ತೆರಳುತ್ತಿದ್ದ ಪವಾಡರಂಗವ್ವನಹಳ್ಳಿಯ ಮಂಜುನಾಥ್ ಅವರ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂಬುಲೆನ್ಸ್ ಚಾಲಕ ಮಹಮದ್ ಮೀರನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಎಸ್ಪಿ ಆರ್. ಬಿ.ಬಸರಗಿ, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



