ವಿಜಯಪುರ : ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಯರ್ರಿಸ್ವಾಮಿಗೌಡ, ವಿರೂಪಾಕ್ಷ, ಸತೀಶ್ ಸೇರಿದಂತೆ ಹಲವು ಹೋರಾಟಗಾರರು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಇಂಡಿ ಟೋಲ್ ಬಳಿಯೇ ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಸರ್ಕಾರ ಕನ್ನಡಿಗರಿಗೆ ಸವಾಲು ಹಾಕಿದೆ. ರಾಜ್ಯಾದ್ಯಂತ ಮರಾಠಿ ಅಭಿವೃದ್ಧಿ ನಿಗಮ ಬೇಡ ಎಂದು ಪ್ರತಿಭಟನೆ ನಡಸುತ್ತಿದ್ದೇವೆ. ಆದರೆ, ಸರ್ಕಾರ ಅಭಿವೃದ್ಧಿ ನಿಗಮ ರಚನೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಜತೆಗೆ 50 ಕೋಟಿ ಅನುದಾನ ಮೀಸಲಿಟ್ಟಿದೆ. ಇದು ಕನ್ನಡಿಗರ ಮರಣ ಶಾಸನವಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಕೂಡ ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಡಿ.5ರಂದು ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ರಾಜ್ಯ ಬಂದ್‍ಗೆ ಕರೆ ಕೊಟ್ಟಿದ್ದೇವೆ. ಬಂದ್ ನಂತರವೂ ಕೈಕಟ್ಟಿ ಕೂರುವುದಿಲ್ಲ. ಜೈಲ್ ಬರೋ ಚಳವಳಿ ನಡೆಸುತ್ತೇವೆ. ನಾಡಿನ ಹಿತಾಸಕ್ತಿಗೆ ಧಕ್ಕೆಯಾಗಿರುವ ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆ ವಿರುದ್ಧ ಸಂಸದರು, ಶಾಸಕರು ಮೌನವಹಿಸಿದ್ದಾರೆ. ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದರು.
ಸಾ.ರಾ.ಗೋವಿಂದ್ ಮಾತನಾಡಿ, ವಿಜಯಪುರದಲ್ಲಿ ಹೋರಾಟ ಮಾಡಲುಬಂದ ಹೋರಾಟಗಾರರನ್ನು 60 ಕಿ.ಮೀ. ಹಿಂದೆಯೇ ತಡೆಯಲಾಗಿದೆ. ಚೀನಾ ಗಡಿಯಲ್ಲಿ ನಿಲ್ಲಿಸಿದಂತೆ ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಆದೇಶ ನೀಡಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.ನಮ್ಮ ಹೋರಾಟಕ್ಕೆ ಸರ್ಕಾರ ಎಷ್ಟೇ ಅಡ್ಡಿಪಡಿಸಿದರೂ ನಾವು ಜಗ್ಗದೆ ಹೋರಾಟವನ್ನು ಮುಂದುವರೆಸಿ ಯಶಸ್ವಿ ಗೊಳಿಸುತ್ತೇವೆ ಎಂದು ಸಾ.ರಾ.ಗೋವಿಂದ್ ಹೇಳಿದರು.