ಅಂಕಣ
ಸಂದಿಗ್ದತೆಯ ಸಂಧರ್ಭಗಳಲ್ಲಿ ಇರಬೇಕಾದ ಸಾಮಯಿಕ ಪ್ರಜ್ಞೆ ಮತ್ತು ದೃಢನಿರ್ಧಾರ
– ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ
ಭಾರತೀಯ ಪ್ರಕಾರ ಕಳೆದ ತಿಂಗಳ ಮಾಘಶುದ್ಧ ಹುಣ್ಣಿಮೆಯನ್ನು ‘ಭಾರತಹುಣ್ಣಿಮೆ’ ಎಂದು ಕರೆಯುತ್ತಾರೆ. ನಮ್ಮ ಮಠದ ಪರಂಪರೆಯಲ್ಲಿ ಇದನ್ನು’ತರಳಬಾಳು ಹುಣ್ಣಿಮೆ’ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣಈ ಮಾಘಶುದ್ಧ ಹುಣ್ಣಿಮೆಯಂದೇ ನಮ್ಮ ಮಠದ ಮೂಲಪುರುಷರೂ, ಬಸವಣ್ಣನವರ ಹಿರಿಯ ಸಮಕಾಲೀನರೂ ಆದ ವಿಶ್ವಬಂಧು ಮರುಳಸಿದ್ದರು ತಮ್ಮ ಶಿಷ್ಯ ತೆಲುಗುಬಾಳು ಸಿದ್ಧೇಶ್ವರನಿಗೆ “ತರಳಾ,ಬಾಳು!’ ಎಂದು ಆಶೀರ್ವಾವಾದ ಮಾಡಿದ್ದು. ಇದರ ಸಂಸ್ಮರಣಾರ್ಥವಾಗಿಯೇ ಪ್ರತಿ ವರ್ಷವೂ ನಾಡಿನಾದ್ಯಂತ ನಮ್ಮ ಮಠದಿಂದ ‘ತರಳಬಾಳುಹುಣ್ಣಿಮೆ ಮಹೋತ್ಸವ’ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ನಮ್ಮ ಗುರುವರ್ಯರಿಗೆಪ್ರೇರಣೆಯನ್ನು ನೀಡಿದವರೆಂದರೆತಿಪಟೂರಿನ ಅಪ್ಪಟ ಗಾಂಧೀವಾದಿ ‘ಸಿರುಮ’ ಎಂದೇ ಖ್ಯಾತನಾಮರಾದ ಎಸ್.ಆರ್ ಮಲ್ಲಪ್ಪನವರು. ಅದುವರೆಗೆ ಎಲ್ಲ ಮಠಗಳಂತೆ ನಮ್ಮ ಮಠದಲ್ಲಿಯೂ ಪ್ರತಿವರ್ಷಅಶ್ವಯುಜ ಮಾಸದಲ್ಲಿ ವಿಜಯದಶಮಿ ಹಬ್ಬವನ್ನು ಆಚರಿಸಿಕೊಂಡು ಬರಲಾಗಿತ್ತು.
ವಿಜಯದಶಮಿ ಹಬ್ಬದ ಆಚರಣೆಯು ಶತ್ರುಗಳ ಮೇಲೆ ವಿಜಯದ ಸಿದ್ಧತೆಯ ಸಂಕೇತವೇ ಹೊರತು ಈ ಹಬ್ಬಕ್ಕೆ ಸಾಹಿತ್ಯಕ ಚಟುವಟಕೆಯ ಚಾರಿತ್ರಿಕಹಿನ್ನೆಲೆ ಇಲ್ಲ ಎಂಬುದು ವಿಚಾರಶೀಲರಾದ ‘ಸಿರುಮ’ ಅವರ ವಾದ. ಗುರುಮನೆ, ದೇವರಮನೆ(ಗುಡಿ) ಗಳಲ್ಲಿ ಇವು ನಡೆಯಬಾರದು. ಅರಮನೆಗೆ ಶತ್ರುಗಳುಂಟು,ಗುರುಮಠಗಳಿಗೆ ಮತ್ತು ದೇವರಿಗೆ ಶತ್ರುಗಳು ಯಾರು? ಗುರುವು ಧರ್ಮದ ಪ್ರತಿ ನಿಧಿ. ಗುರುಮಠಗಳಗೂ ಶತ್ರುಗಳುಂಟೆಂದರೆ ಗುರುಮಠದ ಪಾವಿತ್ರ್ಯಕ್ಕೆ ಹಾನಿ. ಆಳರಸರಿಗೆ ಖಡ್ಗವೇ ಶೌರ್ಯದ ಸಂಕೇತ. ತ್ಯಾಗಮೂರ್ತಿಗಳಾದ ಗುರುಗಳಿಗೆಬಿಲ್ಲು ಬಾಣಗಳಿಂದ ಆಗಬೇಕಾದ್ದೇನಿದೆ? ಎಂದು ಅವರ ಪ್ರಶ್ನೆ. ಈಗ ಅವರು ಬದುಕಿದ್ದರೆ ಏನು ಹೇಳುತ್ತಿದರೋ ಏನೋ? ಇಂದು ಮಠಗಳು ಶಿಷ್ಯರ ಭಕ್ತಿಕಾಣಿಕೆಯಿಂದ ಸಂಪದ್ಭರಿತಗಳಾಗಿರುವುದರಿಂದ ಅಂತಹ ಮಠಗಳ ಗದ್ದುಗೆಯನ್ನೇರಲು ಹೊಂಚುಹಾಕುತ್ತಿರುವ ಶತ್ರುಗಳೂ ಹುಟ್ಟಕೊಂಡಿದ್ದಾರೆ.
ವಿಚಾರಶೀಲರಾದ ಮಲ್ಲಪ್ಪನವರ ಸಲಹೆಯಂತೆ ನಮ್ಮ ಗುರುವರ್ಯರು ಮಠದಲ್ಲಿ ವಿಜಯದಶಮಿ ಹಬ್ಬ ಅಚರಿಸುವುದನ್ನು ಕೈಬಿಟ್ಟು ಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ಮಠದೊಳಗೆ ಸರಳವಾಗಿ ಆಚರಿಸಿಕೊಂಡು ಬಂದಿದ್ದ ‘ತರಳಬಾಳು ಹುಣ್ಣಿಮೆ’ಗೆ ಸಾಹಿತ್ಯಕ, ಸಾಂಸ್ಕೃತಿಕ ಸ್ವರೂಪವನ್ನು ಕೊಟ್ಟು ನಾಡಿನೆಲ್ಲೆಡೆ ಆಚರಿಸಿ ‘ಸರ್ವಜನಾಂಗದ ಶಾಂತಿಯ ತೋಟ’ವನ್ನಾಗಿ ರೂಪಿಸಿದರು.1950ರಲ್ಲಿ ಜಗಳೂರಿನಲ್ಲಿ ಮೈಸೂರು ಮಹಾರಾಜರ ಮಂತ್ರಿಗಳೂ ಜನಸಾಮಾನರ ಬಾಯಲ್ಲಿ ‘ಇಮ್ಮಣ್ಣ’ ಎಂದೇ ಖ್ಯಾತನಾಮರಾಗಿದ್ದ ಜೆ. ಮಹಮದ್ ಇಮಾಂ ರವರ ಅಧ್ಯಕ್ಷತೆಯಲ್ಲಿ ತರಳಬಾಳು ಹುಣ್ಣಿಮೆಯನ್ನು ಆಚರಿಸಿದರು. 1951 ರಲ್ಲಿ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆಮಹೋತ್ಸವದಲ್ಲಿ ಹಿರಿಯ ತಲೆಮಾರಿನ ಸಾಹಿತ್ಯ ದಿಗ್ಗಜರಾದ ಮಾಸ್ತಿ ವೆಂಕಟೇಶಯ್ಯಂಗಾರ್, ಜಿ.ಪಿ. ರಾಜರತ್ನಂ, ಪ್ರೊಫೆಸರ್ ವರದರಾಜ ರಾವ್, ಹಿರೇಮಲ್ಲೂರ ಈಶ್ವರನ್ ಮೊದಲಾದವರು ಭಾಗವಹಿಸಿದ್ದರು.ಕಾಲಚಕ್ರ ತಿರುಗಿದಂತೆ ಅದೇ ಹಳೇಬೀಡಿನಲ್ಲಿ ಕಳೆದ ವರ್ಷ ನಮ್ಮ ಸಮ್ಮುಖದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದು ಆ ಭಾಗದ ಜನರ ಬಹುಕಾಲದಬೇಡಿಕೆಯಾದ ರಣಘಟ್ಟ ನೀರಾವರಿಯೋಜನೆಗೆ ಮುಖಮಂತ್ರಿ ಯಡಿಯೂರಪ್ಪನವರು 124 ಕೋಟಿ ರೂ.ಮುಂಜೂರು ಮಾಡಿ ಸಾರ್ಥಕವೆನಿಸಿತು.
ಈ ವರ್ಷ ಕೊಟ್ಟೂರಿನಲ್ಲಿ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆಯನ್ನು ಕೊರೊನಾ ವೈರಾಣುವಿನ ಕಾರಣದಿಂದ ಮುಂದೂಡಲು ಕೈಗೊಂಡ ನಮ್ಮ ತೀರ್ಮಾನ ವಿಚಾರಶೀಲ ಶಿಷ್ಯರೆಲ್ಲರ ನಿರೀಕ್ಷೆಯೂ ಆಗಿತ್ತು. ಕಳೆದ ಎಲ್ಲ ಹುಣ್ಣಿಮೆ ಮಹೋತ್ಸವಗಳ ಸಿಂಹಾವಲೋಕನವನ್ನು 8 ದಿನಗಳ ಕಾಲ ವಿಶ್ವಾದ್ಯಂತ ನೋಡುವಂತೆ ಅಂತರಜಾಲದಲ್ಲಿ ಬಿತ್ತರಿಸಿದರೂ ಪರಂಪರಾಗತವಾಗಿ ಆಚರಿಸಿಕೊಂಡು ಬಂದ 9ನೇಯ ದಿನದ ‘ಸದ್ದರ್ಮ ಸಿಂಹಾಸನಾರೋಹಣ’ ಕಾರ್ಯಕ್ರಮ ನಮಗೆ ಸಂದಿಗ್ಧತೆಯನ್ನು ಉಂಟುಮಾಡಿತು. ಜಗತ್ತಿನ ಜನರು ಕೊರೊನಾ ವೈರಾಣುವಿನ ಸಂಕಟದಲ್ಲಿರುವಾಗ ಸಂಪ್ರದಾಯದ ಪಾಲನೆ ಪ್ರಸ್ತುತ ಸಂಧರ್ಭದಲ್ಲಿ ಎಷ್ಟರಮಟ್ಟಗೆ ಔಚಿತ್ಯಪೂರ್ಣ?ರೋಂ ನಗರ ಹೊತ್ತಿ ಉರಿಯುತ್ತಿದ್ದಾಗ ನೀರೋ ದೊರೆ ನಿರುಮ್ಮಳವಾಗಿ ಪಿಟೀಲು ನುಡಿಸುತ್ತಿದ್ದ (When Rome was burning Nero was fiddling!) ಎಂಬಂತೆ ಆಗುವುದಿಲ್ಲವೆ? ಎಂಬಆಲೋಚನೆ ಕಾಡಿಸಿತು! ಆದರೂ ಭಕ್ತರ ಹೃದಯದ ಭಾವನೆಗಳನ್ನು ಗೌರವಿಸುವ ಅನಿವಾರ್ಯತೆಯಿಂದಮಠದ ವಿದ್ಯಾರ್ಥಿ ನಿಲಯದ ಮೆಟ್ಟಲುಗಳ ಮೇಲಿನ ವೇದಿಕೆಯಲ್ಲಿ ಸರಳವಾಗಿ ಸಿಂಹಾಸನಾರೋಹಣ ಮಾಡಿ ನಮ್ಮ ಬೌದ್ಧಿಕಚಿಂತನೆ ಸೋಲಬೇಕಾಯಿತು. ಯಾವ ಆಹ್ವಾನ ಪತ್ರಿಕೆಯನ್ನು ಅಚ್ಚು ಹಾಕಿಸದೆ, ಯಾವ ರಾಜಕೀಯ ಧುರೀಣರನ್ನೂ ಆಹ್ವಾನಿಸದೆ, ನಮ್ಮ ಶಾಖಾಮಠದ ಸ್ವಾಮಿಗಳಿಗೆ ಮಾತ್ರ ನಮ್ಮ ಎಡಬಲಗಳಲ್ಲಿ ಆಸನಗಳನ್ನು ಹಾಕಿಸಿ ಸರಳವಾಗಿಆಚರಿಸಲಾಯಿತು. ಆಹ್ವಾನ ಇಲ್ಲದಿದ್ದರೂ ಅಭಿಮಾನದಿಂದ ಆಗಮಿಸಿದ ರಾಜಕೀಯ ಧುರೀಣರು ಮತ್ತು ಶಿಷ್ಯ ಪ್ರಮುಖರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸಭಿಕರ ಸಾಲಿನಲ್ಲಿ ಆಸೀನರಾಗಿದ್ದರು.
1965ರಲ್ಲಿ ಚಿತ್ರದುರ್ಗದಲ್ಲಿ ತರಳಬಾಳು ಹುಣ್ಣಿಮೆ ಜರುಗಿದಾಗ ನಮ್ಮ ಗುರುವರ್ಯರು ಎದುರಿಸಿದ ಸಂದಿಗ್ಧತೆ ಅಪೂರ್ವವಾದುದು.ಮಹೋತ್ಸವಕ್ಕಾಗಿ ಮಠದ ಶಿಲ್ಪಿಗಳು ಹೊಳಲ್ಕೆರೆ ರಸ್ತೆಯ ನಮ್ಮದೇ ಶಾಲೆಯಾದ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಸುಂದರವಾದ ಮಹಾಮಂಟಪದ ನಿರ್ಮಾಣದಲ್ಲಿ ತೊಡಗಿದ್ದರು. ದಿನೇ ದಿನೇ ಒಂದೊಂದೇ ನಿರ್ಮಾಣದ ಹಂತಗಳನ್ನು ದಾಟುತ್ತಾ ಸುಂದರಾತಿಸುಂದರವಾಗಿ ಕಂಗೊಳಿಸುತ್ತಿದ್ದ ಮಂಟಪ ಅಭಿಮಾನಿಗಳ ಎದೆಯುಬ್ಬುವಂತೆ ಮಾಡಿತ್ತು; ಮಠದ ವಿರೋಧಿಗಳ ಮತ್ಸರಕ್ಕೂಕಾರಣವಾಗಿತ್ತು. ಮತ್ಸರದ ಕಿಚ್ಚು ಎಷ್ಟು ಹೆಚ್ಚಾಯಿತೆಂದರೆ ಒಂದು ದಿನ ರಾತ್ರಿ ಯಾರೋ ಕಿಡಿಗೇಡಿಗಳು ನಿರ್ಮಾಣದ ಹಂತದಲ್ಲಿದ್ದ ಮಂಟಪಕ್ಕೆ ಬೆಂಕಿ ಹಚ್ಚಿದರು! ಆಗ ಎಲ್ಲರೂ ಗುರುವರ್ಯರಿಗು ಸಲಹೆ ಕೊಟ್ಟರು:“ಪೋಲೀಸರಿಗೆ ದೂರುಕೊಡಬೇಕು, ಕಿಡಿಗೇಡಿಗಳನ್ನು ಹಿಡಿದು ಬುದ್ಧಿ ಕಲಿಸಬೇಕು!” ಆದರೆ ಗುರುವರ್ಯರು ಅದಕ್ಕೆ ಸುತಾರಾಂ ಒಪ್ಪಲಿಲ್ಲ. “ಕಂಪ್ಲೇಂಟ್ ಕೊಡುವುದು ಬೇಡ.ಉರಿಯುವ ಬೆಂಕಿಯನ್ನು ಮೊದಲು ಆರಿಸಿ. ಈಗ ಹೊಟ್ಟೆ ಉರಿದರೂ ಕಷ್ಟ, ಬಟ್ಟೆ ಉರಿದರೂ ಕಷ್ಟ. ಮೊಟ್ಟಮೊದಲು ನಮ್ಮ ದೃಷ್ಟಿ ನಮ್ಮ ಗುರಿಯತ್ತಇರಬೇಕು. ಯಾವಾಗಲೂ ಕಾರ್ಯಸಾಧಕನು ತನ್ನ ಗುರಿಯತ್ತ ನಡೆಯಬೇಕೇ ವಿನಾ ನಡೆಯುವ ದಾರಿಯಲ್ಲಿ ಬರುವ ಮುಳ್ಳು ಕಲ್ಲುಗಳಿಗೆ ಬೆದರಿ ನಡೆಯುವುದನ್ನು ಬಿಡಬಾರದು. ಈ ದೇಶದ ಹಣೆಬರೆಹ ಇಷ್ಟು. ಒಬ್ಬರನ್ನು ಕಂಡರೆ ಒಬ್ಬರು ಕುದಿಯುವುದು. ನಮ್ಮ ವಿರೋಧಿಗಳ ಉದ್ದೇಶ ಈ ಮಹೋತ್ಸವವನ್ನು ನಿಲ್ಲಿಸುವುದೇ ಆಗಿದೆ. ಪೋಲೀಸರಿಗೆ ದೂರು ನೀಡಿದರೆ,ಅದನ್ನೇ ನೆಪ ಮಾಡಿಕೊಂಡು ಕಾರ್ಯಕ್ರಮವನ್ನು ಪೋಲೀಸರೇ ನಿಲ್ಲಿಸುತ್ತಾರೆ. “ಗಲಾಟೆಯಾಗುತ್ತದೆ. ಸಾರ್ವಜನಿಕ ಶಾಂತಿಗೆ ಭಂಗ ಬರುತ್ತದೆ” ಎಂಬ ಕಾರಣ ಕೊಡುತ್ತಾರೆ.” (ಆಗ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪನವರು ಮಠದ ಕಡುವಿರೋಧಿಗಳಾಗಿದ್ದರಿಂದ ಪೋಲೀಸರು ಹಾಗೆ ಮಾಡುವುದು ಸಾಧ್ಯವೂ ಇತ್ತು.)“ಪೋಲೀಸರಿಗೆ ದೂರು ಕೊಟ್ಟರೆ ವಿರೋಧಿಗಳ ಉದ್ದೇಶ ಈಡೇರುತ್ತದೆ; ಮಹೋತ್ಸವ ನಿಲ್ಲುತ್ತದೆ.” ಎಂದು ಗುರುವರ್ಯರು ಹೇಳಿದರು. ತನಿಖೆಗೆ ಬಂದ ಪೋಲೀಸರಿಗೆ ಗುರುಗಳು ನೀಡಿದ ಹೇಳಿಕೆ; “ಚಳಿಗೆ ಬೆಂಕಿ ಕಾಯಿಸಲು ನಮ್ಮ ಕೆಲಸಗಾರರೇ ಕಸಕಡ್ಡಿಗೆ ಹಚ್ಚಿದ ಬೆಂಕಿಯಿಂದ ಆಗಿರುವ ಅನಾಹುತವಿದು!” ಎಂದು ಹೇಳಿ ಸಾಗಹಾಕಿದರು. ಮಂಟಪ ನಿರ್ಮಾಣ ಮುಂದುವರಿಯಿತು.
ಸಮಾರಂಭಕ್ಕೆ ಎಸ್. ನಿಜಲಿಂಗಪ್ಪನವರನ್ನೂ ಆಹ್ವಾನಿಸಲಾಗಿತ್ತು. ಅವರೂ ಬಂದರು “ನನ್ನನ್ನು ಯಾಕೆ ಕರೆಸಿದ್ದಾರೋ ತಿಳಿಯದು” ಎಂದು ವ್ಯಂಗ್ಯದ ಮಾತುಗಳನ್ನಾಡಿದರು. “ನೀವು ಈ ರಾಜ್ಯದ ಮುಖ್ಯಮಂತ್ರಿ.ಈ ಸಮಾರಂಭದ ಭವ್ಯತೆಯನ್ನು ನೋಡಿ ಸಂತೋಷಪಡಲಿ ಎಂದು ಕರೆಸಿದ್ದೇವೆ!’ ಎಂದು ಸ್ವಾಗತ ಸಮಿತಿಅಧ್ಯಕ್ಷ ಹಿರಿಯ ರಾಜಕೀಯ ಮುತ್ಸದ್ಧಿ ಎಲ್.ಸಿದ್ಧಪ್ಪನವರು ಮಾರುತ್ತರ ಕೊಟ್ಟರು. ಸಮಾರಂಭದ ಕೊನೆಯ ದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಆಗಮಿಸಿದರು; ಬಸವಣ್ಣನವರ ಸಮಗ್ರ ವಚನಗಳ ಇಂಗ್ಲಿಷ್ ಅನುವಾದ “Vachanas of Basavanna” ಕೃತಿಯನ್ನು ಬಿಡುಗಡೆ ಮಾಡಿದರು (ಅನುವಾದ; ಪ್ರೊ ಮೆನಜಿಸ್ ಮತ್ತು ಅಂಗಡಿ)’ನ ಭೂತೋ ನ ಭವಿಷೃತಿ’ ಎಂಬಂತೆ ಮಹೋತ್ಸವ ನಡೆದು ಯಶಸ್ವಿಯಾಯಿತು!
ಇದೇ ಚಿತ್ರದುರ್ಗದಲ್ಲಿ 2005ರಲ್ಲಿ ನಮ್ಮಸಮ್ಮುಖದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ. ಸಂಪ್ರದಾಯದಂತೆ ನಮ್ಮ ಸಿಂಹಾಸನಾರೋಹಣವಾಯಿತು. ನಿವೃತ್ತ ಐ.ಜಿ.ಪಿ ರೇವಣಸಿದ್ದಯ್ಯನವರು (ಈಗಿನ ನಿವೃತ್ತ ಡಿ.ಜಿ.ಪಿ ರೇವಣಸಿದ್ದಯ್ಯನವರ ಮಾವಂದಿರು) ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದು ಬಿದ್ದರು. ವೇದಿಕೆಯ ಮೇಲೆ ಆಸೀನರಾದ ಅತಿಥಿಗಳೆಲ್ಲಾ ಆತಂಕದಿಂದ ಎದ್ದು ನಿಂತರೂ ನಾವು ಮಾತ್ರ ಸಿಂಹಾಸನದ ಮೇಲೆ ಕುಳಿತೇ ಇದ್ದೆವು. ಅದಕ್ಕೆ ಕಾರಣ ಸಿಂಹಾಸನದಲ್ಲಿ ಕುಳಿತಾಗ ಮಧ್ಯೆ ಎದ್ದು ನಿಲ್ಲಬಾರದೆಂಬ ಶಿಷ್ಟಾಚಾರವಲ್ಲ! ಬದಲಾಗಿ ಬೇರೆಯವರಂತೆ ನಾವೂ ಎದ್ದು ನಿಂತಿದ್ದರೆ ಸಭೆಯಲ್ಲಿ ದೊಡ್ಡ ಕೋಲಾಹಲವೇ ಉಂಟಾಗುತ್ತಿತ್ತು. ವಿಷಮ ಸಾಮಾಜಿಕ ಸನ್ನಿವೇಶಗಳಲ್ಲಿ ನೇತಾರನು ಉದ್ವಿಗ್ನತೆಗೆ ಒಳಗಾಗಬಾರದು. ಅಂತಹ ಸಂಧರ್ಭಗಳಲ್ಲಿ ಏನು ಮಾಡಬೇಕೆಂಬುದನ್ನು ಯೋಚನೆ ಮಾಡಿ ಜನರನ್ನು ನಿಯಂತ್ರಿಸಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ನೇತಾರನಾದವನೆ ಅಧೀರನಾದರೆ ಅವನ ಹಿಂಬಾಲಕರೂ ಸಹ ಅಧೈರ್ಯಗೊಳ್ಳುತ್ತಾರೆ. ಯಾರಾದರೂ ಡಾಕ್ಟರು ಸಭೆಯಲ್ಲಿದ್ದರೆ. ಕೂಡಲೇ ವೇದಿಕೆಗೆ ಬರುವಂತೆಪ್ರಕಟಣೆ ಮಾಡಿಸಿದೆವು. ತಕ್ಷಣ ಸಭೆಯಲ್ಲಿ ಶ್ರೋತೃಗಳಾಗಿದ್ದ ದಾವಣಗೆರೆಯಬಾಪೂಜಿ ಮೆಡಿಕಲ್ ಕಾಲೇಜಿನ ಅರವಳಿಕೆ ಮತ್ತು ತುರ್ತುಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ.ಆರ್. ರವಿ ಅವರು ವೇದಿಕೆಗೆಧಾವಿಸಿ ಬಂದರು. ಕುಸಿದು ಬಿದ್ದ ರೇವಣಸಿದ್ದಯ್ಯನವರ ಬಾಯಿಗೆ ಬಾಯಿ ಹಚ್ಚಿ ಉಸಿರು ತುಂಬಿದರು. ಎದೆಯ ಮೇಲೆ ಒತ್ತಿ ಒತ್ತಿ ಅವರಿಗೆ ಪುನಃ ಉಸಿರಾಟ ಆರಂಭವಾಗುವಂತೆ ಮಾಡಿದರು,ನಿಂತುಹೋದ ಹೃದಯಕ್ಕೆ ಪುನಃ ಚಾಲನೆ ದೊರೆಯಿತು. ರೇವಣಸಿದ್ಧಯ್ಯನವರು ಸುಧಾರಿಸಿಕೊಂಡು ಎದ್ದು ನಿಂತರು, ಮತ್ತೆ ಭಾಷಣವನ್ನು ಬೇಡ ಎಂದರೂಮುಂದುವರಿಸಿದರು.ಕೆಲ ನಿಮಿಷ ಮಾತನಾಡಿ ಕುರ್ಚಿಯಲ್ಲಿ ಕುಳಿತರು ಈ ಕಹಿ ಘಟನೆ ನಡೆದ ನಂತರವೂ ನಾಲ್ಕಾರು ವರ್ಷ ಅವರು ಬದುಕಿದರು;ನಂತರ ವಯೋಸಹಜಅನಾರೋಗ್ಯದಿಂದ ತೀರಿಕೊಂಡರು.
ಮಠದ ಸ್ವಾಮಿಗಳಾಗಿ ಸಾರ್ವಜನಿಕ ಬದುಕಿನಲ್ಲಿ ಎದುರಿಸಿದ ಕೆಲವು ಸಂದಿಗ್ಧತೆಯ ಸಂಧರ್ಭಗಳನ್ನು ಮೇಲೆ ಗಮನಿಸಿದಿರಿ.ವಿದ್ಯಾರ್ಥಿ ದೆಸೆಯಲ್ಲಿ ವೈಯಕ್ತಿಕ ಜೀವನದಲ್ಲಿ ನಮಗೆ ಎದುರಾದ ಅನೇಕ ಸಂದಿಗ್ದತೆಗಳಲ್ಲಿ ಒಂದೆರಡು ಸಂಧರ್ಭಗಳು ಹೀಗಿವೆ: ಹಣಕಾಸಿನ ವಿಚಾರದಲ್ಲಿ ನಮ್ಮನ್ನು ಕಟ್ಟುನಿಟ್ಟಾಗಿ ಬೆಳೆಸಿದವರೆಂದರೆ ಬಾಲ್ಯದಲ್ಲಿ ನಮ್ಮ ಪೂರ್ವಾಶ್ರಮದ ತಂದೆ ಈಶ್ವರಯ್ಯನವರು, ಪ್ರೌಢವಯಸ್ಸಿನಲ್ಲಿ ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಬಾಲ್ಯದಲ್ಲಿ ಶಿವಮೊಗ್ಗ ಸರಕಾರೀ ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಏನೇ ಖರ್ಚು ಮಾಡಿದರೂ ಅದಕ್ಕೆ ಒಂದು ನೋಟ್‌ಬುಕ್ ನಲ್ಲಿ ಲೆಕ್ಕ ಬರೆದಿಡುವುದನ್ನು ನಮ್ಮ ಪೂರ್ವಾಶ್ರಮದ ತಂದೆ ಕಲಿಸಿದ್ದರು. ಆಗಾಗ್ಗೆ ಲೆಕ್ಕ ತಪಾಸಣೆ ಮಾಡಿ ಸಹಿ ಹಾಕಿ ಮುಂದಿನ ಖರ್ಚಿಗೆ ಹಣ ಕೊಡುತ್ತಿದ್ದರು. ಒಮ್ಮೆ ಅವರು ಲೆಕ್ಕ ತಪಾಸಣೆ ಮಾಡುವಾಗ ನಗದು ಶಿಲ್ಕು ಎಂಟಾಣೆ ಕಡಿಮೆ ಬಂದಿತ್ತು. ಸ್ನೇಹಿತನೊಬ್ಬನು ತೊಂದರೆ ಇದೆಯೆಂದು ಕೇಳಿ ಕೈಗಡ ಪಡೆದಿದ್ದನು.
ಇನ್ನು ಮುಂದೆ ಯಾರಿಗೂ ಸಾಲ ಕೊಡಬಾರದೆಂದೂ, ಯಾರ ಹತ್ತಿರವೂ ಸಾಲ ಮಾಡಬಾರದೆಂದೂ ಕಣ್ಣುಕೆಂಪಗೆ ಮಾಡಿ ಗದರಿಸಿದ್ದರು. ಸಾಲ ಕೊಡುಕೊಳ್ಳುವಿಕೆಯಲ್ಲಿ ಸ್ನೇಹವಿಶ್ವಾಸ ಕೆಡುತ್ತದೆಯೆಂದು ತಿಳಿಹೇಳಿದ್ದರು. ಆತ್ಮೀಯ ಸ್ನೇಹಿತರು ಕೇಳಿದಾಗ ಕೊಡದೇ ಇದ್ದರೂ ವಿಶ್ವಾಸ ಕೆಡುವುದಿಲ್ಲವೇ? ಎಂದು ಮರು ಪ್ರಶ್ನೆ ಹಾಕುವ ಧೈರ್ಯ ಆಗ ನಮಗೆ ಇರಲಿಲ್ಲ. ಬೆನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿಗೆಂದು ಸಂಶೋಧನೆಯನ್ನು ಮಾಡುತ್ತಿರುವಾಗ ನಮಗೆ UGC ಯಿಂದ ಜೂನಿಯರ್ ರಿಸರ್ಚ್ ಫೆಲೋಷಿಪ್ ಮುಂಜೂರಾಗಿ ಒಮ್ಮೆಲೇ ಅನೇಕ ತಿಂಗಳ ಬಾಕಿ ಸುಮಾರು ಹತ್ತು ಸಾವಿರ ರೂ. ಬಂದಿತ್ತು. ಈ ಸಂತೋಷದ ಸುದ್ದಿಯನ್ನು ಪೂರ್ವಾಶ್ರಮದ ತಂದೆಗೆ ತಿಳಿಸಿದಾಗ ಅವರಿಂದ ಅನಿರೀಕ್ಷಿತವಾದ ಬೇಡಿಕೆಯ ಪತ್ರ ಬಂದಿತು. ಯಾರಿಗೂ ಸಾಲ ಕೊಡಬಾರದೆಂದು ಬಾಲ್ಯದಲ್ಲಿ ತಿಳಿಹೇಳಿದ್ದ ಅವರೇ, “ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದೇನೆ ಈಗ ನಿನಗೆ ಬಂದಿರುವ ಹಣವನ್ನು ಕಳುಹಿಸಿಕೊಟ್ಟರೆ ಅದಕ್ಕೆ ಬಡ್ಡಿಯನ್ನು ಹಾಕಿ ಕೊಡುತ್ತೇನೆ” ಎಂದು ಅವರೇ ಸಾಲ ಕೇಳಿ ಬರೆದಿದ್ದರು. ಅವರಿಗೆಕೊಡಬೇಕೇ ಬೇಡವೇ ಎಂದು ನಿರ್ಧರಿಸಲಾಗದೆ ನಮ್ಮ ಪರಮಾರಾಧ್ಮ ಗುರುವರ್ಯರಿಗೆ ಪತ್ರ ಬರೆದುಕೊಂಡೆವು. ಮರುಟಪಾಲಿನಲ್ಲಿಯೇ ಗುರುವರ್ಯರಿಂದ ಸ್ವಹಸ್ತಾಕ್ಟರಗಳಲ್ಲಿ ಕಟ್ಟುನಿಟ್ಟಾದ ಆದೇಶ ಬಂದಿತು; “ನಿನಗೆ ಬಂದಿರುವ ಹಣವನ್ನು ನಿನ್ನ ತಂದೆಗೆ ಕೊಟ್ಟರೆ ಶಿಷ್ಯರಲ್ಲಿ ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತದೆ. ಖಂಡಿತಾ ಕೊಡಬೇಡ!” ನಮಗೆ ಬಂದಿದ್ದಹಣ UGC ಯಿಂದ ಬಂದ ಫೆಲೋಷಿಪ್ ಹಣವೇ ಹೊರತು ಮಠದಿಂದ ತರಿಸಿಕೊಂಡ ಹಣವಾಗಿರಲಿಲ್ಲ ಆದರೂ ಪೂಜ್ಯ ಗುರುವರ್ಯರ ಆಣತಿ ಹೀಗಾಗಿದೆ, ಅವರ ಆದೇಶವನ್ನು ಮೀರಿ ಕಳುಹಿಸಲು ಸಾಧ್ಯವಾಗುತ್ತಿಲ್ಲವೆಂದು ವಿಷಾದಿಸಿ ತಂದೆಗೆ ಪತ್ರ ಬರೆಯುವಾಗ ನಮ್ಮ ಕಣ್ಣಂಚು ಹನಿಗೂಡಿತ್ತು!
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com