ದಾವಣಗೆರೆ: ಏಕವ್ಯಕ್ತಿ ಟ್ರಸ್ಟ್ ಡೀಡ್ ರೂಪಿಸಿಕೊಂಡು ತರಳಬಾಳು ಮಠಕ್ಕೆ ಸೇರಿದ ಅಂದಾಜು 2,000 ಕೋಟಿ ಮೌಲ್ಯದ ಆಸ್ತಿಯನ್ನು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಮಠವನ್ನು ತಮ್ಮ ಸ್ವಂತ ಆಸ್ತಿಯಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಸಾದರ ಲಿಂಗಾಯತ ಸಮುದಾಯದ ಅಣಬೇರು ರಾಜಣ್ಣ, ಬಿ.ಸಿ. ಪಾಟೀಲ್ ಟೀಂ ಆರೋಪಿಸಿದೆ.
ನಗರದ ಹೊರ ವಲಯದ ಅಪೂರ್ವ ರೆಸಾರ್ಟ್ನಲ್ಲಿ ನಡೆದ ಮಠದ ಭಕ್ತರ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಎರಡು ಸಾವಿರ ಕೋಟಿ ರೂ. ಹಣ ಆಸ್ತಿ ನಮ್ಮ ಹೆಸರಿಗೆ ಮಾಡಿಕೊಂಡು ಸ್ವಾಮೀಜಿ ಸಾಧು ಲಿಂಗಾಯತ ಸಮಾಜಕ್ಕೆ ಮೋಸ ಮಾಡಬಾರದು. ಭಕ್ತರು ದಾನ, ಧರ್ಮ ಮಾಡಿದ್ದು ಸಮಾಜಕ್ಕೆ. ಆದರೆ ಸ್ವಾಮೀಜಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಮಠದ ಬೈಲಾ ತಿದ್ದು ಮಾಡಿದ್ದಾರೆ.
ಈಗ 78 ವರ್ಷ ಆಗಿದೆ ಸ್ವಾಮೀಜಿ. 60ನೇ ವರ್ಷಕ್ಕೆ ಪೀಠ ತ್ಯಾಗ ಮಾಡಬೇಕಿತ್ತು. ಆದರೆ ಮೂಲ ಬೈಲಾ ತಿದ್ದುಪಡಿ ಮಾಡಿದ್ದಾರೆ. 1938 ರಲ್ಲಿ ಹಿರಿಯ ಸ್ವಾಮೀಜಿ ಒಂದು ಬೈಲಾ ಮಾಡಿದ್ದಾರೆ. ಭಕ್ತರು ಮಠದ ಪೀಠಾಧೀಶರನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವಿತ್ತು. ಆದಾಯ ತೆರಿಗೆ ಕಾರಣ ಹೇಳಿ, ಬೈಲಾದಲ್ಲಿ ಮಠದ ಹೆಸರೇ ಬದಲಿಸಿ ಇವರದ್ದೇ ಸ್ವಂತ ಮಠ ಮಾಡಿಕೊಂಡಿದ್ದಾರೆ. ಟ್ರಸ್ಟ್ ಮಾಡಿಕೊಂಡು ಮಠದ ಎಲ್ಲ ಆಸ್ತಿ ಟ್ರಸ್ಟ್ ವ್ಯಾಪ್ತಿಗೆ ಬರುತ್ತದೆ. ಉತ್ತರಾಧಿಕಾರಿ ನೇಮಕ ಅಧಿಕಾರ ಸ್ವಾಮೀಜಿ ತಮ್ಮಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಅಣಬೇರು ರಾಜಣ್ಣ ಆರೋಪಿಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ್, ನಾವು ರೆಸಾರ್ಟ್ನಲ್ಲಿ ಸಭೆ ಮಾಡಿದ್ರೆ ಕುಡುಕರ ಸಭೆ ಎಂದಿದ್ದಾರೆ. ನಾವು ಕುಡುಕರು ಆದರೆ ನೀವು ಹಾಲು ಕುಡಿದವರು ಚೆನ್ನಾಗಿ ಮಾತಾಡಲಿ.ಸ್ವಾಮೀಜಿಗೆ ಕೈಮುಗಿದು ಕೇಳುವೆ, ಸಮಾಜ ಒಡೆಯ ಬೇಡಿ. ಭಕ್ತರ ಮನಸ್ಸಿನಲ್ಲಿ ವಿಷ ಬಿತ್ತಬೇಡಿ. ನಾವು ಬಂಡವಾಳ ಶಾಹಿಗಳಲ್ಲ. ನೀವು ಎರಡು ಸಾವಿರ ಕೋಟಿ ರೂಪಾಯಿ ನಿಮ್ಮ ಹೆಸರಿನಲ್ಲಿ ಮಾಡಿಕೊಂಡು ನಮಗಿಂತ ಬಂಡವಾಳ ಶಾಹಿ ನೀವೇ ಆಗಿದ್ದೀರಿ ಎಂದರು.
ಸುತ್ತೂರ ಮಠ ಹಾಗೂ ಮಾದಾರ ಚನ್ನಯ್ಯ ಸ್ವಾಮೀಜಿ ಉತ್ತಾಧಿಕಾರಿ ನೇಮಕಮಾಡಿದ್ದಾರೆ. ಸಿರಿಗೆರೆ ಸ್ವಾಮೀಜಿ ಏನಾಗಿದೆ. ಉತ್ತಾಧಿಕಾರಿ ನೇಮಕ ಮಾಡಿ. ನಾವು ಈ ಹಿಂದೆ 4 ರಂದು ಇಲ್ಲಿಯೇ ಸಭೆ ಮಾಡಿದೇವು. ಕುಡುಕರ ಸಭೆ ಮಾಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದರು. ನಾವು ಕುಡುಕರು ನೀವು ಹಾಲು, ಅದರಲ್ಲಿ ಗೋವಿನ ಹಾಲು ಕುಡಿದವರು ನ್ಯಾಯಯುತವಾಗಿ ನಡೆದುಕೊಳ್ಳಿ ಎಂಬ ಆರೋಪ ಮಾಡಿದ್ದಾರೆ.
ತರಳಬಾಳು ಮಠದ ಪೀಠತ್ಯಾಗ ಮಾಡುವುದಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 2012ರಲ್ಲಿ ಘೋಷಿಸಿದ್ದರು. ನಿವೃತ್ತಿ ಹೊಂದಲು ನಾನೇನು ಸರ್ಕಾರಿ ನೌಕರನೇ ಎಂಬುದಾಗಿ ಈಗ ಪ್ರಶ್ನಿಸುತ್ತಿದ್ದಾರೆ. ಆಡಿದ ಮಾತು ತಪ್ಪುವುದು ಮಠಾಧೀಶರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.
ಪೀಠತ್ಯಾಗ ಘೋಷಣೆ ಮಾಡಿದಾಗ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ 65 ವರ್ಷವಾಗಿತ್ತು. 60 ವರ್ಷಕ್ಕೆ ಪೀಠತ್ಯಾಗ ಮಾಡುವ ಪರಂಪರೆ ಮಠದಲ್ಲಿದೆ. ಭಕ್ತರು ಅಪೇಕ್ಷಿಸದಿದ್ದರೂ ಪೀಠತ್ಯಾಗದ ಬಗ್ಗೆ ತಾವೇ ಮಾಡಿದ್ದ ಘೋಷಣೆಗೆ ಸ್ವಾಮೀಜಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.
ತರಳಬಾಳು ಮಠದ ಸದ್ಭಕ್ತರ ಸಮನ್ವಯ ಸಮಿತಿ ಆ.18ರಂದು ನಿಗದಿಪಡಿಸಿದ ಭೇಟಿಯನ್ನು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿರಸ್ಕರಿಸಿದರು. ಮಠದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಾಮೀಜಿಗೆ ಇಷ್ಟವಿಲ್ಲ. ಖಾಸಗಿಯಾಗಿ ಯಾರೊಬ್ಬರನ್ನೂ ಭೇಟಿ ಮಾಡುವುದಿಲ್ಲ ಎಂಬುದನ್ನು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಮಠಕ್ಕೆ ಪತ್ರ ಕೊಡಲು ಸೂಚಿಸಿದ್ದಾರೆ. ಹೀಗಾಗಿ ಆ.4ರಂದು ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಸ್ವಾಮೀಜಿ ಭೇಟಿ ಸಾಧ್ಯವಾಗಲಿಲ್ಲ ಎಂದರು
ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ,ಮಠ ಉಳಿಯಬೇಕು ಎಂಬುದಷ್ಟೇ ನಮ್ಮ ಕಾಳಜಿ. ಸಮಾಜ ಒಡೆಯುವ ಕಾರ್ಯವನ್ನು ಯಾರೊಬ್ಬರೂ ಮಾಡಬಾರದು. ಸಮಾಜದಲ್ಲಿ ಮೂಡಿರುವ ಗೊಂದಲ ಶೀಘ್ರ ನಿವಾರಣೆಯಾಗಲಿ ಎಂದರು.
ಸಭೆಯಲ್ಲಿ ಎಸ್. ಎ . ರವೀಂದ್ರನಾಥ, ಸಮುದಾಯದ ಮುಖಂಡರಾದ ಡಿ.ಸಿ.ರಾಜಪ್ಪ, ಬೆನಕಪ್ಪ, ಕೆ.ಸಿದ್ಧಪ್ಪ, ಶ್ರೀನಿವಾಸ ಮೆಳ್ಳೇಕಟ್ಟಿ, ವೆಂಕಟೇಶ್ ಜಕ್ಕಲಿ, ಚೇತನ್ ಎಲೆಬೇತೂರು, ನಾಗರಾಜ್ ಪಲ್ಲಾಗಟ್ಟಿ ಸೇರಿ ಸಾಧು ಲಿಂಗಾಯತ ಸಮಾಜದ ಹಿರಿಯರು ಭಾಗಿಯಾಗಿದ್ದರು.