ದಾವಣಗೆರೆ: ಸಿಎಂ ಸ್ಥಾನ ಭದ್ರಗೊಳಸಿಕೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರು ಈ ಬಾರಿ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಆಗಮಿಸಬೇಕು. ಈ ವೇಳೆ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಸರಕಾರದ ಆದೇಶ ಹೊತ್ತು ತರಬೇಕು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠ ಆರಂಭಿಕ ಹೋರಾಟದಲ್ಲಿ ಬಿ.ಎಸ್. ಯಡಿಯೂರಪ್ಪ ಅವರೂ ಭಾಗಿಯಾಗಿದ್ದರು. ಆಗ ಮುಖ್ಯಮಂತ್ರಿಯಾದರೆ ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬರುವುದಾಗಿ ಹೇಳಿದ್ದರು. ಆದರೆ, ಅವರು ಮೂರು ಬಾರಿ ಮುಖ್ಯಮಂತ್ರಿಯಾದರೂ ಈ ಪ್ರಮಾಣ ಪಾಲನೆ ಮಾಡಿಲ್ಲ. ಈ ಕಾರಣದಿಂದಾಗಿಯೇ ಅವರು ಒಮ್ಮೆಯೂ ಪೂರ್ಣಾವಧಿ ಮುಖ್ಯಮಂತ್ರಿಯಾಗಿಲ್ಲ. ಈ ಬಾರಿಯಾದರೂ ಅವರು ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಆದೇಶ ತರಬೇಕು ಎಂದರು.
ದತ್ತಪೀಠ ಹಿಂದುಳಿಗಳಿಗೆ ಸೇರಿದ್ದು ಎಂಬುದಕ್ಕೆ ಎಲ್ಲ ದಾಖಲೆಗಳೂ ಇವೆ. ದಾಖಲೆಗಳೆಲ್ಲವೂ ಸ್ಪಷ್ಟವಾಗಿಯೂ ಇವೆ. ಆದರೂ ಈ ವಿವಾದವನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿರುವುದು ಸರಿಯಲ್ಲ. ದತ್ತಪೀಠವನ್ನು ಹಿಂದುಳಿಗಳಿಗೆ ವಹಿಸಿಕೊಡಲು ಯಡಿಯೂರಪ್ಪ ಅವರಿಗೆ ಒಳ್ಳೆಯ ಅವಕಾಶವಿದೆ. ಈಗಲೂ ಅವರು ದತ್ತಪೀಠ ಮುಕ್ತಿಗೊಳಿಸುವ ಕೆಲಸ ಮಾಡದಿದ್ದರೆ ಚಳಿಗಾಲದ ಅಧಿವೇಶನ ಮುಗಿದು ಮುಂದಿನ ಅಧಿವೇಶನದ ವೇಳೆಗೆ ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡಲಾಗುವುದು. ಈ ಹೋರಾಟದಲ್ಲಿ ಏನೇ ಅವಘಡಗಳಾದರೂ ಅದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದರು.
ಸಚಿವ ಸಿ.ಟಿ. ರವಿಯವರು ಸಹ ದತ್ತಮಾಲೆ ಧರಿಸಿದ ವೇಳೆಯೇ ತಮ್ಮ ಸರಕಾರ ಬಂದ 24ಗಂಟೆಗಳಲ್ಲಿ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ, ಈವರೆಗೂ ಆ ಕೆಲಸ ಮಾಡಿಸಲು ಆಗಿಲ್ಲ. ನಾಲಿಗೆ ಮೇಲೆ ಸ್ವಾಭಿಮಾನವಿದ್ದರೆ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಕ್ಷಮಿಸಲ್ಲ ಎಂದರು.



