ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ರನ್ ಮೆಷಿನ್, ಚೇಸಿಂಗ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಸಹ ಟೆಸ್ಟ್ ಕ್ರಿಕೆಟ್‌ಗೆ ಇಂದು (ಮೇ 12) ನಿವೃತ್ತಿ ಘೋಷಣೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಭಾರತ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.9 ಸರಾಸರಿ ಮತ್ತು 55.6 ಸ್ಟ್ರೈಕ್ ರೇಟ್‌ನಲ್ಲಿ 9230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ ಅಜೇಯ 254. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಟೆಸ್ಟ್‌ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಬ್ಯಾಗಿ ಬ್ಲೂ ಕ್ಯಾಪ್ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವನಪರ್ಯಂತ ನನ್ನೊಂದಿಗೆ ತೆಗೆದುಕೊಂಡು ಹೋಗಬಹುದಾದ ಪಾಠಗಳನ್ನು ಕಲಿಸಿತು. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ಹಿಂತಿರುಗಿ ನೋಡುತ್ತೇನೆ.
ಬಿಳಿ ಉಡುಪಿನಲ್ಲಿ ಆಡುವುದೆಂದರೆ ಅದೊಂದು ರೀತಿಯಲ್ಲಿ ಆಳವಾದ ವೈಯಕ್ತಿಕ ಬಂಧವಿದೆ. ಶಾಂತವಾದ ಜಂಜಾಟ, ದೀರ್ಘಾವಧಿ ಹಾಗೂ ಯಾರೂ ನೋಡದ ಆದರೆ ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುವ ಸಣ್ಣ ಕ್ಷಣಗಳು ಈ ಸ್ವರೂಪದಲ್ಲಿವೆ. ನಾನು ಈ ಸ್ವರೂಪದಿಂದ ದೂರ ಸರಿಯುವುದು ಸುಲಭವಲ್ಲ ಅನಿಸುತ್ತಿತ್ತು. ಆದರೆ, ಇದು ಸರಿಯಾದ ನಿರ್ಧಾರ ಅನಿಸುತ್ತದೆ.
ನಾನು ನನ್ನಲ್ಲಿದ್ದ ಎಲ್ಲವನ್ನೂ ಈ ಸ್ವರೂಪಕ್ಕೆ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್ ಕ್ರಿಕೆಟ್ ನನಗೆ ಹಿಂತಿರುಗಿಸಿದೆ. ನಾನು ಹೊಂದಿದ್ದ ಎಲ್ಲವನ್ನೂ ಟೆಸ್ಟ್ ಕ್ರಿಕೆಟ್‌ಗೆ ನೀಡಿದ್ದೇನೆ. ಅಲ್ಲದೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಅದರಿಂದ ನನಗೆ ದಕ್ಕಿದೆ. ನನ್ನೊಂದಿಗೆ ಆಡಿದ ಪ್ರತಿಯೊಬ್ಬರಿಗೂ ಕೃತಜ್ಣತೆ ಅರ್ಪಿಸುತ್ತೇನೆ. ಅಲ್ಲದೆ ಯಾವತ್ತಿದ್ದರೂ ನಾನು ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ಹಿಂತಿರುಗಿ ನೋಡುತ್ತೇನೆ #269, ಸೈನ್ ಆಫ್. ಎಂದು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.