ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ಅಲಂಕರಿಸಲು ಕನ್ನಡಿಗ ರಾಹುಲ್ ದ್ರಾವಿಡ್ ಸಮ್ಮತಿ ಸೂಚಿಸಿದ್ದಾರೆ. ದುಬೈ ನಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ ಬಳಿಕ ಮುಖ್ಯ ಕೋಚ್ ಹುದ್ದೆ ಅಲಂಕರಿಸಲಿದ್ದಾರೆ.
ದುಬೈನಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ಟಿ20 ವರ್ಲ್ಡ್ ಕಪ್ನ ನಂತರ ಅವರು ಕಾರ್ಯಾರಂಭ ಮಾಡಲಿದ್ದಾರೆ . ಕಳೆದ 6 ವರ್ಷಗಳಿಂದ ಭಾರತದ ಎ ಟೀಂ ಮತ್ತು ಅಂಡರ್ 19 ಟೀಂಗಳ ಉಸ್ತುವಾರಿ ವಹಿಸಿಕೊಂಡಿದ್ದರು. 48 ವರ್ಷದ ದ್ರಾವಿಡ್ ಹುದ್ದೆ ಅಲಂಕರಿಸಲು ಮೊದಲು ನಿರಾಕರಿಸಿದ್ದರು. ನಿನ್ನೆಯ ಐಪಿಎಲ್ ಫೈನಲ್ಸ್ನ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಮಾತನಾಡಿ ಒಪ್ಪಿಗೆ ಪಡೆದಿದ್ದಾರೆ.
ಭಾರತದ ದಿ ವಾಲ್ ಖ್ಯಾತಿಯ ದ್ರಾವಿಡ್, ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ಮುಖ್ಯ ಕೋಚ್ ಸ್ಥಾನಕ್ಕೆ ವಿದಾಯ ಹೇಳುತ್ತಿರುವ ಹಿರಿಯ ಆಟಗಾರ ರವಿ ಶಾಸ್ತ್ರಿ ಅವರ ಸ್ಥಾನ ತಉಂಬಲಿದ್ದಾರೆ. ರಾಹುಲ್ ದ್ರಾವಿಡ್ರ ಗರಡಿಯಲ್ಲಿ ಪಳಗಿದ ರಿಷಭ್ ಪಂತ್, ಅವೇಶ್ ಖಾನ್, ಪೃಥ್ವಿ ಶಾ, ಹನುಮ ವಿಹಾರಿ, ಶುಬ್ಮಾನ್ ಗಿಲ್ ಭಾರತ ತಂಡದಲ್ಲಿದ್ಧಾರೆ.



