ಅಡಿಲೇಡ್:ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇನಿಂಗ್ಸ್ ಮುನ್ನಡೆ ಸಾಧಿಸಿದ್ದು, ಆಸ್ಟ್ರೇಲಿಯಾ 191ಕ್ಕೆ ಆಲೌಟ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 244 ರನ್ ಗಳಿಸಿತ್ತು. ಇದಕ್ಕೆ ಟಿಮ್ ಪೈನೆ ನೇತೃತ್ವದ ಪಡೆ 191 ರನ್‌ಗೆ ಆಲೌಟ್ ಆಗಿದೆ. . 53 ರನ್ ಮುನ್ನಡೆಯೊಂದಿಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್ ಆರಂಭಿಸಿದೆ.
ಆಸಿಸ್‌ಗೆ ವೇಗಿ ಜಸ್‌ಪ್ರೀತ್ ಬೂಮ್ರಾ ಆರಂಭಿಕ ಆಘಾತ ನೀಡಿದರು. ಆರಂಭಿಕ ಮ್ಯಾಥ್ಯೂ ವೇಡ್ (8) ಮತ್ತು ಜೋ ಬರ್ನ್ಸ್ (8) ಇಬ್ಬರನ್ನೂ ಎಲ್‌ಬಿ ಬಲೆಗೆ ಕೆಡವಿದ ಬೂಮ್ರಾ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಬಳಿಕ ಬಂದ ಸ್ಟೀವ್ ಸ್ಮಿತ್ (1), ಟ್ರಾವಿಸ್ ಹೆಡ್ (7), ಮತ್ತು ಕೆಮರೂನ್ ಗ್ರೀನ್ (11)ಬೇಗನೆ ಪೆವಿಲಿಯನ್ ಸೇರಿಕೊಂಡರು.
ಈ ವೇಳೆ ಜೊತೆಯಾದ ಭರವಸೆಯ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಶೇನ್ ಮತ್ತು ನಾಯಕ ಟಿಮ್ ಪೈನೆ ಆರನೇ ವಿಕೆಟ್ ಜೊತೆಯಾಟದಲ್ಲಿ 41 ರನ್ ಗಳಿಸಿದರು. ಲಾಬುಶೇನ್ 47 ರನ್ ಗಳಿಸಿ ಔಟಾದರೆ, ಕೊನೆವರೆಗೂ ವಿಕೆಟ್ ಒಪ್ಪಿಸದೆ ಆಡಿದ ಪೈನೆ 99 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತ ಪರ ಮಿಂಚಿದ ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರೆ, ಉಮೇಶ್ ಯಾದವ್ 3 ಹಾಗೂ ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಕಬಳಿಸಿದರು.



