ಬೆಂಗಳೂರು: ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನದ ಪಂದ್ಯದಿಂದ ಹೊರಗೆ ಉಳಿದಿದ್ದ ರೋಹಿತ್ ಶರ್ಮಾ, ಟೆಸ್ಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಇವರ ಜೊತೆಗೆ ವೇಗಿ ಇಶಾಂತ್ ಶರ್ಮಾ ಕೂಡಾ ಆಸೀಸ್ ಗೆ ಪ್ರಯಾಣ ಬೆಳೆಸುತ್ತಿಲ್ಲ.
ರೋಹಿತ್ ಮತ್ತು ಇಶಾಂತ್ ಶರ್ಮಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟ್ರೈನಿಂಗ್ ಪಡೆಯುತ್ತಿದ್ದಾರೆ. ಆದರೆ ಇದುವರೆಗೆ ನಿರೀಕ್ಷಿತ ಮಟ್ಟದಲ್ಲಿ ಗುಣಮುಖವಾಗದ ಕಾರಣ ರೋಹಿತ್ ಹಾಗೂ ಇಶಾಂತ್ ಆಸೀಸ್ ವಿಮಾನ ಏರುವುದು ಅನುಮಾನ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಇವರಿಬ್ಬರೂ ದುಬೈನಲ್ಲಿ ನಡೆದ ಐಪಿಎಲ್ ನಲ್ಲಿ ಗಾಯಗೊಂಡಿದ್ದರು. ಇಶಾಂತ್ ಶರ್ಮಾ ಆರಂಭದಲ್ಲೇ ಗಾಯಾಳಾಗಿ ತಂಡದಿಂದ ಹೊರಬಿದ್ದರೆ, ರೋಹಿತ್ ಟೂರ್ನಿ ಮಧ್ಯೆ ಗಾಯಗೊಂಡಿದ್ದರು. ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಟೂರ್ನಿಯ ಕೊನೆಯಲ್ಲಿ ಮತ್ತೆ ತಂಡವನ್ನು ಮುನ್ನಡೆಸಿದ್ದರು.ಆಸೀಸ್ ಸರಣಿಗೆ ಆಯ್ಕೆಯಾದ ತಂಡದಿಂದ ಇಬ್ಬರು ಆಟಗಾರರನ್ನು ಕೈಬಿಡಲಾಗಿತ್ತು. ಏಕದಿನ ಮತ್ತು ಟಿ20 ತಂಡಕ್ಕೆ ರೋಹಿತ್ ಬದಲು ಕೆ ಎಲ್ ರಾಹುಲ್ ರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ.



