ಶಿವಮೊಗ್ಗ: ಸಿಎಂ ಯಡಿಯೂರಪಪ್ಪ ಆಪ್ತ ಚನ್ನವೀರಪ್ಪ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಮತ್ತೊಬ್ಬ ಅಭ್ಯರ್ಥಿ ಯೋಗೀಶ್ ಗೌಡ ಸಹ ಚನ್ನವೀರಪ್ಪ ನವರಿಗೆ ಮತ ಹಾಕಿದ್ದಾರೆ.
ಸಹಕಾರ ಇಲಾಖೆ ಜಂಟಿ ನಿಬಂಧಕರು ಮಂಜುನಾಥ್ ಗೌಡರನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಅಧ್ಯಕ್ಷರಾಗಿದ್ದ ಮಂಜುನಾಥ್ ಗೌಡ, ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚನ್ನವೀರಪ್ಪ ಆಯ್ಕೆಯಾದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಶಿವಮೊಗ್ಗ ನಗರ ಶಾಖೆಯಲ್ಲಿ ನಕಲಿ ಬಂಗಾರದ ಅಡಮಾನ ಸಾಲ ಅವ್ಯವಹಾರ ನಡೆದಿದೆ. ಜೊತೆಗೆ ಸಾಲ ನೀಡಿಕೆಯಲ್ಲಿ ಕೂಡ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಡಿಸಿಸಿ ಬ್ಯಾಂಕ್ ಗೆ ಭೇಟಿ ನೀಡಿ ತನಿಕೆ ನಡೆಸಿ ಅಡಿಟ್ ಮಾಡಿದ್ದರು. ಇದರ ನಡುವೆ ಸಹಕಾರ ಇಲಾಖೆ ಜಂಟಿ ನಿಬಂಧಕರು ಮತ್ತು ಇಲಾಖೆ ಕಾರ್ಯದರ್ಶಿಗಳು ಬ್ಯಾಂಕ್ ನ ಅಧ್ಯಕ್ಷರಾಗಿದ್ದ ಮಂಜುನಾಥ ಗೌಡರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಮೂರು ಜನ ನಾಮಪತ್ರ ಸಲ್ಲಿಕೆ ಮಾಡಿದ್ದರು. ಚನ್ನವೀರಪ್ಪ, ಷಡಾಕ್ಷರಿ ಮತ್ತು ಯೋಗೀಶ್ ಗೌಡ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಬೆಳೆವಣಿಗೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಆಯ್ಕೆ ಆಗಬೇಕು ಎನ್ನುವ ತೀರ್ಮಾನಕ್ಕೆ ನಿರ್ದೇಶಕರು ಬಂದರು. ಈ ವೇಳೆ ಯೋಗೀಶ್ ಗೌಡ ನಾಮಪತ್ರ ವಾಪಾಸ್ ಪಡೆಯಲು ಹೋದಾಗ ಸಮಯ ಮೀರಿ ಹೋಗಿತ್ತು. ಹೀಗಾಗಿ ತಾಂತ್ರಿಕವಾಗಿ ಚುನಾವಣೆ ನಡೆಯಿತು. ಈ ವೇಳೆ ಮೊದಲೇ ತೀರ್ಮಾನ ಮಾಡಿದಂತೆ ಚನ್ನವೀರಪ್ಪ ಅವರಿಗೆ ಎಲ್ಲಾ 14 ಜನ ಮತದಾರರು ಮತ ಹಾಕಿದರು.ಯೋಗೀಶ್ ಗೌಡ ಸಹ ಚನ್ನವೀರಪ್ಪನವರಿಗೆ ಮತ ಚಲಾಯಿಸಿದರು. ಚನ್ನವೀರಪ್ಪ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಲೋಕಸಭಾ ಸದಸ್ಯ ರಾಘವೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು.



