Connect with us

Dvgsuddi Kannada | online news portal | Kannada news online

ದಾವಣಗೆರೆ: ಯುವರತ್ನ ಸಿನಿಮಾ ವೀಕ್ಷಿಸಿದ ವಿವಿಧ ಮಠಾಧೀಶರು: ಸಿನಿಮಾ ಬಗ್ಗೆ ವಚನಾನಂದ ಶ್ರೀ ಏನು ಹೇಳಿದ್ರು..?

ಪ್ರಮುಖ ಸುದ್ದಿ

ದಾವಣಗೆರೆ: ಯುವರತ್ನ ಸಿನಿಮಾ ವೀಕ್ಷಿಸಿದ ವಿವಿಧ ಮಠಾಧೀಶರು: ಸಿನಿಮಾ ಬಗ್ಗೆ ವಚನಾನಂದ ಶ್ರೀ ಏನು ಹೇಳಿದ್ರು..?

ದಾವಣಗೆರೆ: ಇಂದು ದಾವಣಗೆರೆ ಜಿಲ್ಲೆಯ ವಿವಿಧ ಮಠಾಧೀಶರು ಒಂದೆಡೆ ಸೇರಿ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ದಾವಣಗೆರೆಯಲ್ಲಿ ವೀಕ್ಷಿಸಿದ್ದಾರೆ.  ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು  ಶ್ರೀ ವಚನಾನಂದ ಸ್ವಾಮೀಜಿ, ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಚಲನಚಿತ್ರ ವೀಕ್ಷಿಸಿದ್ದಾರೆ.

yuvarathan moive swamiji.jpg 2

ಈ ಬಗ್ಗೆ ವಚನಾನಂದ ಶ್ರೀಗಳು ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅವರ ಬರಹ ಇಲ್ಲಿದೆ:  ಚಲನಚಿತ್ರಗಳು ಸಮಾಜಕ್ಕೆ ದಿಕ್ಕು ತೋರಿಸುವ ಪ್ರಮುಖ ಮಾಧ್ಯಮ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಚಲನಚಿತ್ರಗಳು ಸಮಾಜಕ್ಕೆ ಒಳ್ಳೆಯ ದಿಕ್ಕು ತೋರಿಸುವುದಕ್ಕಿಂತ ಬೇರೆಯದ್ದೇ ಅಜೆಂಡಾಗಳನ್ನು ಒಳಗೊಂಡು ಪ್ರದರ್ಶಿಸಲ್ಪಡುತ್ತವೆ.

ಕೆಲವೇ ಕೆಲವು ಚಲನಚಿತ್ರಗಳು ಆ ಗುಂಪಿನಿಂದ ಹೊರತಾಗಿ ಸಮಾಜದ ಒಳಿತಿಗಾಗಿ ಅತ್ಯುತ್ತಮ ಸಂದೇಶ ನೀಡುವ ಕೆಲಸವನ್ನು ಮಾಡುವಂತಹ ಪ್ರಯತ್ನಕ್ಕೆ ಕೈ ಹಾಕುತ್ತವೆ. ಇಂತಹ ಕಾರ್ಯ ಹಾಗೂ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವವರು ನಟ ಪುನೀತ್‌ ರಾಜ್‌ಕುಮಾರ್‌.

ʼರಾಜಕುಮಾರʼ ಸಿನೆಮಾ ಮೂಲಕ ವೃಧ್ದಾಪ್ಯದಲ್ಲಿರುವ ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವ ಸಂದೇಶ ನೀಡಿದ್ದರಿಂದ, ಸಾವಿರಾರು ಕುಟುಂಬಗಳು ಮತ್ತೊಮ್ಮೆ ಜೊತೆಯಾಗಿದ್ದನ್ನ ನಾವು ನೋಡಿದ್ದೇವೆ. ಈ ಬಾರಿ ಸಮಾಜದಲ್ಲಿ ಯುವಕರನ್ನು ದಾರಿತಪ್ಪಿಸುವ ಹಲವಾರು ವಿಷವರ್ತುಲಗಳನ್ನು ಬಯಲಿಗೆಳೆಯುವ ಮೂಲಕ ಪ್ರತಿಯೊಬ್ಬ ಯುವ ಜನತೆಯಲ್ಲೂ ಇರುವ ರತ್ನವನ್ನು ಹೆಕ್ಕಿ ತೆಗೆಯುವ ಅವಕಾಶಗಳನ್ನು ತೋರಿಸಿದ್ದಾರೆ.

yuvarathan moive swamiji.jpg 3

ಇತ್ತೀಚೆಗೆ ಹರಿಹರ ಪಂಚಮಸಾಲಿ ಪೀಠದಲ್ಲಿ ನಡೆದ ಹರಜಾತ್ರೆಯಲ್ಲಿ ನಡೆದ ಯುವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಟ ಪುನೀತ್‌ ರಾಜ್‌ಕುಮಾರ್‌ ತಮ್ಮ ರತ್ನದಂತಹ ದಿವ್ಯತೇಜಸ್ಸಿನಿಂದ ಎಲ್ಲರನ್ನೂ ಆಕರ್ಷಿಸಿದ್ದರು.

ಸಹಜವಾಗಿ ಎಲ್ಲ ಚಲನಚಿತ್ರಗಳನ್ನು ನೋಡುವ ಮನಸ್ಸಾಗುವುದಿಲ್ಲ. ಆದರೆ, “ಯುವರತ್ನ” ನೋಡಿ ಬಂದು ಆ ಚಲನಚಿತ್ರವನ್ನು ನೀವು ವೀಕ್ಷಿಸಲೇ ಬೇಕು ಎಂದು ಡಿವೈಎಸ್ಪಿ ಶ್ರೀ ನರಸಿಂಹ ತಾಮ್ರದ್ವಜ ಒತ್ತಾಯಿಸಿದಾಗ, ಒತ್ತಾಯದಿಂದಲೇ ಒಪ್ಪಿಗೆ ನೀಡಿದೆವು. ಈ ಸುಯೋಗದಲ್ಲಿ ನಮ್ಮ ಜೊತೆಗೂಡಿದ್ದು, ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ,ಡಿವೈಎಸ್ಪಿ ಶ್ರೀ ನರಸಿಂಹ ತಾಮ್ರದ್ವಜ, ಹರಿಹರ ಸಿಪಿಆಯ್ ಶ್ರೀ ಸತೀಶ್, ಪಿಎಸ್ಆಯ್ ಶ್ರೀ ವಿರೇಶ ಮುಂತಾದವರು.

‘ರಾಜಕುಮಾರʼ ಚಲನ ಚಿತ್ರ ನೋಡಿದ್ದ ನಮಗೆ, ಈ ‘ಯುವರತ್ನʼ ದಲ್ಲೂ ಏನೋ ಹೊಸತು ಇರಲಿದೆ ಎನ್ನುವ ಆಸೆ ಗರಿಗೆದರಿತ್ತು. ‘ಯುವರತ್ನʼ ಚಲನಚಿತ್ರ ಪ್ರಾರಂಭವಾಗಿದ್ದು ಹೇಗೋ ಮುಗಿದಿದ್ದು ಹೇಗೋ ಎನ್ನುವುದೇ ತಿಳಿಯಲಿಲ್ಲ. ಆ ರೀತಿಯ ಕಥಾಹಂದರ ನಮ್ಮನ್ನು ಚಲನಚಿತ್ರದಲ್ಲಿ ಮುಳುಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸಮಾಜದ ಮುಂಚೂಣಿಯ ಸ್ಥಾನದಲ್ಲಿರುವವರು ನೋಡಲಬೇಕಾದ ಸಿನಿಮಾ ಇದಾಗಿದೆ.

ಸರಕಾರಿ ಶಿಕ್ಷಣ ಕೇಂದ್ರಗಳು ಯಾಕಾಗಿ ಮುಚ್ಚುತ್ತಿವೆ. ಅದರ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಯುವಕರು ದಾರಿ ತಪ್ಪುವ ಬಗೆ ಹೇಗೆ. ಹಾಗೂ ಮಕ್ಕಳ ಜೀವನದಲ್ಲಿ ಶಿಕ್ಷಕನ ಪಾತ್ರ ಏನು. ಈ ರೀತಿ ಹತ್ತು ಹಲವು ವಿಷಯಗಳನ್ನು ತಿಳಿಸುವ ಕಥಾ ಹಂದರ ಈ ಚಲನಚಿತ್ರದಲ್ಲಿದೆ. ಸಮಾಜದ ಎಲ್ಲಾ ವರ್ಗದವರೂ ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಲನಚಿತ್ರವಿದು. ನಮ್ಮ ಈಗಿನ ಬದುಕಿನ ಹಾಗೂ ಸಮಾಜದ ಪ್ರತಿಬಿಂಬ ಈ ಚಲನಚಿತ್ರದಲ್ಲಿದೆ.

ಜೀವನದಲ್ಲಿ ಮೊದಲ ಬಾರಿಗೆ 3 ಜನ ಪ್ರಮುಖ ಸ್ವಾಮೀಜಿಗಳೊಂದಿಗೆ ಚಲನಚಿತ್ರ ನೋಡುವ ಭಾಗ್ಯ ನಮ್ಮದಾಗಿತ್ತು. ಅದಲ್ಲದೆ ಸ್ವತಃ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಚಲನಚಿತ್ರ ವೀಕ್ಷಿಸಿದ್ದಕ್ಕೆ ಧನ್ಯವಾದ ಹೇಳಿದ್ದು ವಿಶೇಷವಾಗಿತ್ತು.

ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಹೊಸ ವಿಷಯಗಳ ಬಗ್ಗೆ ಗಮನ ಸೆಳೆಯಲು ಅಮೀರ್‌ ಖಾನ್‌ ಅಭಿನಯದ ಚಲನಚಿತ್ರಗಳು ಬಹಳ ಇಷ್ಟವಾಗುತ್ತವೆ. ಅವರ ತಾರೇ ಜಮೀನ್‌ ಪರ್‌ ಚಲನಚಿತ್ರ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಅವಲೋಕಿಸಬೇಕಾದ ಇನ್ನೊಂದು ಮಜಲನ್ನು ನಮ್ಮ ಮುಂದೆ ಇಡುವಲ್ಲಿ ಸಫಲವಾಯಿತು. ಇಂತಹದ್ದೇ ಸಮಾಜದ ಬಗ್ಗೆ ಬದ್ದತೆಯನ್ನು ಹೊಂದಿ ಸುಧಾರಣೆಗೆ ಅವಕಾಶ ನೀಡುವಂತಹ ಚಲನಚಿತ್ರ ʼಯುವರತ್ನʼ ಆಗಿದೆ. ಇಂತಹ ಚಲನಚಿತ್ರಗಳು ಹೆಚ್ಚು ಹೆಚ್ಚು ಬರಲಿ.

ಅಲ್ಲದೆ, ಅಪ್ಪನಂತಹ ಮೇರು ನಟನ ಮಗನಾಗಿ ಅವರನ್ನು ಮೀರಿಸುವಂತಹ ಎಲ್ಲಾ ಗುಣಗಳು ಇವರಲ್ಲಿ ಇವೆ. ಅಪ್ಪನ ನೆರಳಿನಂತೆ ಬಳ್ಳಿಯಾಗಿ ವಿಶಾಲವಾಗಿ ಹಬ್ಬುತ್ತಿರುವ ಇವರ ಬತ್ತಳಿಕೆಯಿಂದ ಇಂತಹದ್ದೇ ನೂರಾರು ಚಲನಚಿತ್ರಗಳು ಹೊರಹೊಮ್ಮಲಿ.

  • ಪವರ್‌ ಆಫ್‌ ಯೂತ್‌ ಹಾಡಿನ ಕೆಲವು ಸಾಲುಗಳಂತೂ ಅತ್ಯದ್ಭುತ ಹಾಗೂ ಪ್ರೇರಣದಾಯಕ:
  • ಚಾಲೆಂಜ್ ಯಾವುದೇ ಬರಲಿ
  • ಚಾಲೆಂಜ್ ಯಾವುದೇ ಇರಲಿ
  • ಎದುರಿಸು ನೀನು ಎದುರಾಳಿಯನು
  • ಹಿಂದೆ ತಿರುಗಿ ನೋಡದೆ ಯುವ
  • ಗೆಲುವು ಯಾರಪ್ಪನದಲ್ಲ
  • ಯಶಸ್ಸು ಒಬ್ಬನದಲ್ಲ
  • ಪಟ್ಟರೆ ಶ್ರಮವ
  • ಒಳ್ಳೆದಿನವ ಕಾಣುವೆ ನೀನು
  • ಅನುಮಾನ ಪಟ್ಟ ಜನರ
  • ಪೋನಿನ ಡಿಪಿ ಆಗುವಾ
  • ಗೆಲ್ಲಬೇಕು ನೀ ನಿಲ್ಲೊ ವರೆಗು
  • ನಿಲ್ಲಬೇಕು ನೀ ಗೆಲ್ಲೊ ವರೆಗು
  • ಛಲದಿಂದ ನಗುವಲ್ಲೇ ಕೊಲ್ಲು
  • ಅವಮಾನ ಮಾಡಿದವರ
  • ಕಾಮೆಂಟು ಮಾಡೋರೆಲ್ಲ
  • ಕೆಲಸಾನ್ನ ಮಾಡೊರಲ್ಲ
  • ಟೀಕೆಗಳಿಗೆ ಕಿವಿ ಕೊಡಬೇಡ
  • ನಿನಗೆ ಅವರು ಹೋಲಿಕೆ ಅಲ್ಲ
  • ಪರೀಕ್ಷೆಯಲ್ಲಿ ಫೇಲ್ ಆಗೋದ್ರು
  • ಬದುಕು ಕಟ್ಟುವ
  • ಹೇ ಹೆಸರು ಮಾಡಿ ಹಸಿರಾಗೋ ಹಾಗೆ
  • ಉಸಿರು ಹೊದರೂ ಹೆಸರಿರೊ ಹಾಗೆ
  • ಆ ಚರಿತ್ರೆಗೆ ನೀನೇ ಮುನ್ನುಡಿ

ಇದು ಸಮಾಜದ ಪ್ರತಿಯೊಬ್ಬರೂ ನೊಡಲೇಬೇಕಾದ ಚಲನಚಿತ್ರ. ಮಾಸ್ಕ್‌ ಧರಿಸಿ – ಕರೋನಾ ನಿಯಮಾವಳಿಗಳನ್ನು ಪಾಲಿಸಿಕೊಳ್ಳುವ ಮೂಲಕ ಚಲನಚಿತ್ರವನ್ನು ವೀಕ್ಷಿಸಿ. ಈ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸಿ

-ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top