ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಶನಿವಾರ ಹೊಸ ತಂಡವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯಾದರ್ಶಿಯಾಗಿ ನೇಮಿಸಲಾಗಿದೆ.

ಸಂಸದ ತೇಜಸ್ವಿ ಸೂರ್ಯ ಅವರಿಗೆ ಪಕ್ಷದ ಯುವ ಘಟಕದ ಹೊಣೆ ನೀಡಲಾಗಿದೆ. ಇನ್ನೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಪಿ.ಮುರಳೀಧರ್ ರಾವ್, ಅನಿಲ್ ಜೈನ್, ಸರೋಜ್ ಪಾಂಡೆ ಅವರ ಸ್ಥಾನಗಳಿಗೆ ಹೊಸಬರ ನೇಮಕವಾಗಿದೆ. ಅವರ ಸ್ಥಾನಗಳಿಗೆ ಸಿ.ಟಿ.ರವಿ, ಭೂಪೇಂದ್ರ ಯಾದವ್, ಕೈಲಾಶ್ ವಿಜಯ್‌ವರ್ಗೀಯ್ ಸೇರಿದಂತೆ ಹೊಸ ಮುಖಂಡರನ್ನು ಆಯ್ಕೆ ಮಾಡಲಾಗಿದೆ.
ಡಾ.ರಮಣ್ ಸಿಂಗ್, ವಸುಂಧರಾ ರಾಜೇ, ಮುಕುಲ್ ರಾಯ್, ಅನ್ನಪೂರ್ಣಾ ದೇವಿ, ಬೈಜ್ಯಂತ್ ಜಯ ಪಾಂಡಾ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.
ಪಕ್ಷದ ರಾಷ್ಟ್ರೀಯ ವಕ್ತಾರರ ಸಂಖ್ಯೆಯನ್ನು 23ಕ್ಕೆ ಹೆಚ್ಚಿಸಲಾಗಿದೆ. ಸಂಸದ ಅನಿಲ್ ಬಲೂನಿ ಅವರನ್ನು ಪ್ರಧಾನ ವಕ್ತಾರರನ್ನಾಗಿ ಮಾಡಲಾಗಿದೆ ಹಾಗೂ ಮೀಡಿಯಾ ನಿರ್ವಹಣೆ ಹೊಣೆ ಅವರಿಗೇ ಮುಂದುವರಿದಿದೆ. ಸಂಸದ ರಾಜೀವ್ ಚಂದ್ರಶೇಖರ್ ಅವರುಕೂಡ ವಕ್ತಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.



