ಡಿವಿಜಿ ಸುದ್ದಿ, ತುಮಕೂರು: ರಾಜ್ಯದಲ್ಲಿ ಉಪ ಚುನಾವಣೆ ರಣ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರಾಜೇಶ್ ಇಂದು ಮಧ್ಯಾಹ್ನ ಬಿಜೆಪಿಗೆ ಸೇರ್ಪಡೆಗೆ ಸಿದ್ಧವಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಈಗಾಗಲೇ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಜೆಡಿಎಸ್ ತೆಕ್ಕೆಯಲ್ಲಿದ್ದ ಕ್ಷೇತ್ರಕ್ಕೆ ಜೆಡಿಎಸ್ ಇನ್ನು ಕೂಡ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಹೀಗಾಗಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರಾಜೇಶ್ ಗೌಡ ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ. ರಾಜೇಶ್ ಸೇರ್ಪಡೆಗೆ ಈಗಾಗಲೇ ಮೂಲ ಬಿಜೆಪಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಿಜೆಪಿಗೆ ತಲೆ ನೋವಾಗಿದೆ.
ಡಾ. ರಾಜೇಶ್ ಕಳೆದ 15 ವರ್ಷದಿಂದ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಜೆಡಿಎಸ್ ನಲ್ಲಿ ಯಾವುದೇ ಸ್ಥಾನ ಮಾನ ನೀಡಿರಲಿಲ್ಲ. ಹೀಗಾಗಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರಲಿದ್ದಾರೆ. ಈ ಮೂಲಕ ಶಿರಾ ಉಪ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸುವ ಲೆಕ್ಕಾಚಾರದಲ್ಲಿದ್ದಾರೆ.



