ಡಿವಿಜಿ ಸುದ್ದಿ, ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ತಕ್ಷಣ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
ಬಿಜೆಪಿ ಕಚೇರಿಯಿಂದ ವರ್ಚುಯಲ್ ಕಾರ್ಯಕ್ರಮ ಮೂಲಕ ಆರ್ ಆರ್ ನಗರದಲ್ಲಿ ಮತಯಾಚಿಸಿ ಸಿಎಂ, ಯಾವುದೇ ಜಾತಿ ರಾಜಕಾರಣ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಎಲ್ಲ ಜಾತಿಯನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಒಕ್ಕಲಿಗ ಸಮುದಾಯದ ಸಚಿವರು ನಮ್ಮಲ್ಲಿ ಹೆಚ್ಚಿದ್ದಾರೆ. ಮುನಿರತ್ನ ಕೊರೊನಾ ಸಂದರ್ಭದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದು ಅವರು 40 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗುತ್ತೇನೆ. ಸಂಪುಟ ವಿಸ್ತರಣೆನೋ, ಪುನಾರಚನೆಯೋ ಕಾದು ನೋಡಬೇಕು. ದೆಹಲಿಯ ವರಿಷ್ಠರು ಏನು ಹೇಳುತ್ತಾರೋ ಹಾಗೆ ನಡೆಯಲಿದೆ. ಮುನಿರತ್ನ ಅವರು ಗೆದ್ದ ತಕ್ಷಣ 100ಕ್ಕೆ 100ರಷ್ಟು ಮಂತ್ರಿ ಮಾಡುತ್ತೇವೆ ಎಂದರು.
17 ಶಾಸಕರು ರಾಜೀನಾಮೆ ಕೊಟ್ಟು ಆಡಳಿತ ಪಕ್ಷದಿಂದ ಹೊರಬಂದರು. ಕಳೆದ ಉಪಚುನಾವಣೆಯಲ್ಲಿ 13 ಜನ ಗೆದ್ದು ಬಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಜನರ ವಿಶ್ವಾಸ ಬಿಜೆಪಿ ಕಡೆ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಈಗಾಗಲೇ ಮುನಿರತ್ನ ಗೆದ್ದಾಗಿದ್ದು, ಅಂತರ ಲೆಕ್ಕಹಾಕಬೇಕಿದೆ ಎಂದರು.