ಡಿವಿಜಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಮಂಡಿಸಿದ ಅವಿಶ್ವಾಸದಲ್ಲಿ ಸಿಎಂ ಯಡಿಯೂರಪ್ಪ ಅವರು ಧ್ವನಿ ಮತದ ಮೂಲಕ ವಿಶ್ವಾಸ ಮತ ಸಾಬೀತು ಪಡಿಸಿದರು.
ವಿಧಾನ ಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಂತರ ಮಾತನಾದ ಸಿಎಂ ಯಡಿಯೂರಪ್ಪ, ಮುಂಬರುವ ಉಪ ಚುನಾವಣೆಯಲ್ಲಿ ನೀವು ಇದೇ ರೀತಿ ಆರೋಪ ಮಾಡಿ. ನಾವು ಗೆದ್ದು ಬರುತ್ತೇವೆ. ಇನ್ನು ಹತ್ತು ವರ್ಷ ನಿಮಗೆ ಪ್ರತಿಪಕ್ಷ ಕಾಯಂ ಎಂದೂ ಯಡಿಯೂರಪ್ಪ ಹೇಳಿದರು.
ನನ್ನ ಪುತ್ರ ವಿಜಯೇಂದ್ರನ ಮೇಲೆ ಆರೋಪ ಮಾಡಿದ್ದೀರಿ.. ಆ ಆರೋಪ ಸಾಬೀತು ಪಡಿಸುವ ಜವಾಬ್ದಾರಿ ನಿಮ್ಮದು. ಸಿಬಿಐಗಾದರೂ ಕೊಡಿ,ಲೋಕಾಯುಕ್ತಕ್ಕಾದರೂ ಹೋಗಿ. ಸತ್ಯಾಂಶ ಹೊರಬರಬೇಕು. ಆರೋಪ ನಿಜವಾದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು.
ಬಿಡಿಎ ಗೃಹ ನಿರ್ಮಾಣ ಯೋಜನೆಯ ಟೆಂಡರ್ ನನ್ನ ಕಾಲದಲ್ಲಿ ಆಗಿಲ್ಲ. ನಿಮ್ಮ ಕಾಲದಲ್ಲಿ ಆಗಿದ್ದು. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದರು.

ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ಬಿಡಿಎ ಟೆಂಡರ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವನ್ನು ಪ್ರಸ್ತಾಪಿಸಿದರು. ಇದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಆರೋಪ– ಪ್ರತ್ಯಾರೋಪ ನಡೆಯಿತು.
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮಧ್ಯೆ ಒಂದು ಹಂತದಲ್ಲಿ ಮಾತಿನ ಚಕಮಕಿಯೇ ನಡೆಯಿತು. ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡರು. ಈ ರೀತಿ ಆರೋಪ ಮಾಡುವ ನಿನಗೆ ತಲೆ ಕಟ್ಟಿದೆಯೇನೊ ಎಂದು ಯಡಿಯೂರಪ್ಪ ಪ್ರಶ್ನಿಸಿದಾಗ, ನಿನ್ನ ತಲೆಕೆಟ್ಟಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಇಡೀ ಕೃತ್ಯದಲ್ಲಿ ನಮ್ಮ ಸರ್ಕಾರದ ಪಾಲು ಇಲ್ಲ. ಬಿಡಿಎ ಸಂಬಂಧಪಟ್ಟಂತೆ ಗೃಹ ನಿರ್ಮಾಣ ಯೋಜನೆಯ ಟೆಂಡರ್, ಎಲ್ಲವೂ ನೀವು ಮಂತ್ರಿ ಆಗಿದ್ದಾಗ ನಡೆದಿರುವುದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮತ್ತೆ ಮಾತನಾಡಿದ ಸಿಎಂ , ನಿನ್ನ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದರು. ನೀನು ಮೊದಲು ರಾಜೀನಾಮೆ ಕೊಡಬೇಕು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.