ಡಿವಿಜಿ ಸುದ್ದಿ, ಹರಿಹರ: ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಡಾ. ವೈ.ನಾಗಪ್ಪ (87) ಇಂದು ನಿಧನ ಹೊಂದಿದ್ದಾರೆ. ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ.
ಹರಿಹರದಲ್ಲಿ ಇಂದು ಸಂಜೆ 5ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ಹರಿಹರ ವಿಧಾನಸಭಾ ಕ್ಷೇತ್ರದಿಂದ 1989, 1999 ಹಾಗೂ 2004ರಲ್ಲಿ ನಾಗಪ್ಪ ಅವರು ಶಾಸಕರಾಗಿದ್ದರು. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾಗಪ್ಪ ಸಮಾಜ ಕಲ್ಯಾಣ ಸಚಿವರಾಗಿದ್ದರು. ಇದಲ್ಲದೆ ಕೆಎಸ್‌ಎಸ್‌ಐಡಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದರು.
ವೈದ್ಯಕೀಯ ಶಿಕ್ಷಣ ಪಡೆದಿದ್ದ ನಾಗಪ್ಪ ಅವರು 1976ರಿಂದ 1979ರವರೆಗೆ ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. 1980ರಲ್ಲಿ ಹರಿಹರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಲ್ಲಿ ಚುನಾವಣೆಗೆ ಸ್ಪರ್ಧಿಸಿದ ನಾಗಪ್ಪ ಅವರು,2008ರ ಚುನಾವಣೆ ನಂತರ ರಾಜಕೀಯದಿಂದ ದೂರ ಉಳಿದಿದ್ದರು.



