Connect with us

Dvgsuddi Kannada | online news portal | Kannada news online

ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಭರ್ಜರಿ ಗೆಲುವು ; ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆ

ರಾಷ್ಟ್ರ ಸುದ್ದಿ

ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಭರ್ಜರಿ ಗೆಲುವು ; ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆ

ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ  ಪ್ರಕಟವಾಗಿದ್ದು ಯುಡಿಎಫ್, ಎಲ್ ಡಿಎಫ್  ಮಧ್ಯೆ ನೇರ ಸ್ಪರ್ಧೆಯ ನಡುವೆ ಬಿಜೆಪಿ ನೇತೃತ್ವದ ಎನ್ ಡಿ ಎ  ಹಲವು ಪಾಲಿಕೆ, ನಗರಸಭೆ, ಪಂಚಾಯಿತಿಗಳಲ್ಲಿ ಉತ್ತಮ ಫಲಿತಾಂಶ ಪಡೆದಿದೆ.

ಎಲ್ ಡಿ ಎಫ್ ವಶದಲ್ಲಿದ್ದ ಪಂಡಾಲಂ ಮುನ್ಸಿಪಾಲಿಟಿಯನ್ನು ಬಿಜೆಪಿಯ ಎನ್ ಡಿಎ  ವಶಕ್ಕೆ ಪಡೆದುಕೊಂಡಿದೆ. 30 ವಾರ್ಡುಗಳ ಫಲಿತಾಂಶ ಪ್ರಕಟವಾಗಿದ್ದು, ಎನ್ ಡಿ ಎ 17 ಸ್ಥಾನ ಗೆದ್ದುಕೊಂಡಿದೆ. ಎಲ್ ಡಿಎಫ್ 7 ಹಾಗೂ ಯುಡಿಎಫ್ 5 ಸ್ಥಾನ ಗಳಿಸಿವೆ. ಇನ್ನು 3 ವಾರ್ಡ್ ಫಲಿತಾಂಶ ಬಾಕಿ ಇದ್ದು, ಈ ಪೈಕಿ 2ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪಂಥನಂತಿಟ್ಟ ಜಿಲ್ಲಾ ವ್ಯಾಪ್ತಿಯ ಪಂಡಾಲಂ ಮುನ್ಸಿಪಾಲಿಟಿ ಐತಿಹಾಸಿಕ ನಗರಿಯಾಗಿದ್ದು, ಶಬರಿಮಲೆ ದೇಗುಲ ನಿರ್ವಹಣೆ ಹೊತ್ತುಕೊಂಡಿರುವ ರಾಜಮನೆತನ ಕೂಡಾ ಈ ಪ್ರದೇಶದಲ್ಲಿದೆ.

ಈ ಹಿಂದೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ವಿವಾದ ತಾರಕಕ್ಕೇರಿದ್ದಾಗ ಪಂಡಾಲಂ ರಾಜಮನೆತನ ಖಡಕ್ ಎಚ್ಚರಿಕೆ ನೀಡಿತ್ತು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ, ಪೂಜಾಪದ್ದತಿಗೆ ಯಾವ ರೀತಿಯಲ್ಲೂ ಚ್ಯುತಿ ಬರಬಾರದು. ಭಾರೀ ಪ್ರತಿಭಟನೆಯ ನಡುವೆಯೂ ಒಂದು ವೇಳೆ 10-50ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಿದ್ದೇ ಆದಲ್ಲಿ, ದೇವಾಲಯವನ್ನು ಮುಚ್ಚಲು ರಾಜಮನೆತನ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿ ಅಭ್ಯರ್ಥಿಗಳು ಕೊಚ್ಚಿಯ ಮೇಯರ್ ಅಕಾಂಕ್ಷಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ ಬಳಿಕ ತಿರುವನಂತಪುರಂ ಮೇಯರ್ ಕೂಡಾ ಸೋಲಿಸಿದ್ದಾರೆ. ಇದಲ್ಲದೆ ಕಣ್ಣೂರು ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ನೀಲಂಬೂರ್ ಹಾಗೂ ಕಲಚ್ಚೇರಿ ಮುನ್ಸಿಪಾಲಿಟಿಯಲ್ಲೂ ಬಿಜೆಪಿ ಗೆಲುವು ದಾಖಲಿಸಿದೆ.ತ್ರಿಶ್ಶೂರ್ ಮುನ್ಸಿಪಾಲ್ ಕಾರ್ಪೊರೇಷನ್ ನಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ಬಿ ಗೋಪಾಲಕೃಷ್ಣನ್ ಸೋಲು ಕಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ: 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಈ ಗೆಲುವು ಬಿಜೆಪಿಗೆ ಮಹತ್ವ ಪಡೆದುಕೊಂಡಿದೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top