ನವದೆಹಲಿ: ದೇಶದ ರೈತರ ಜೀವನಾಡಿ ನೈರುತ್ಯ ಮುಂಗಾರು ಕೊನೆಗೂ ದೇಶವನ್ನು ಪ್ರವೇಶಿಸಿದೆ. ಇಂದು (ಜೂನ್ 08) ಕೇರಳ ಕರಾವಳಿಗೆ ಅಪ್ಪಳಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ (IMD) ಅಧಿಕೃತವಾಗಿ ಪ್ರಕಟಿಸಿದೆ.
ನೈರುತ್ಯ ಮುಂಗಾರು ಲಕ್ಷದ್ವೀಪ ಮತ್ತು ಕೇರಳ ಪ್ರವೇಶಿಸಿದೆ.ಕೇರಳದಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾರುತಗಳು ಚಲಿಚೆ. ಆದರೆ, ಮೊದಲ ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋತ್ಯ ಮಾನ್ಸೂನ್ ಮಳೆ ಜೂನ್ 1 ರಂದು ಕೇರಳ ಕರಾವಳಿಯನ್ನು ಅಪ್ಪಳಿಸುವುದು ವಾಡಿಕೆ. ಹವಾಮಾನ ಬದಲಾವಣೆ ಮತ್ತು ಚಂಡಮಾರುತದ ಚಲನೆಯಿಂದಾಗಿ ಒಂದು ವಾರ ತಡವಾಗಿ ದೇಶವನ್ನು ಪ್ರವೇಶಿಸಿದೆ. ಕಳೆದ ವರ್ಷ ಮೇ 29 ರಂದು, 2021 ರಲ್ಲಿ ಜೂನ್ 3 ರಂದು ಮತ್ತು 2020 ರಲ್ಲಿ ಜೂನ್ 1 ರಂದು ಕರಾವಳಿಯನ್ನು ಅಪ್ಪಳಿಸಿತು.
ಈ ಬಾರಿ ಜೂನ್ 7 ಅಥವಾ 8ರ ವೇಳೆಗೆ ಮುಂಗಾರು ಕೇರಳಕ್ಕೆ ಪ್ರವೇಶಿಸಲುದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇಂದು ಕೇರಳಕ್ಕೆ ನೈರುತ್ಯ ಮುಂಗಾರು ಅಪ್ಪಳಿಸಿದ್ದು, 48 ಗಂಟೆಯಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಈಶಾನ್ಯದ ಭಾಗಗಳಲ್ಲಿ ಮಳೆಯಾಗಲಿದೆ.