ಭೋಪಾಲ್: ಗಿರಣಿ ಕಾರ್ಖಾನೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ.
ಮುನೇಂದ್ರ ರಾಜ್ಪುತ್ ಗಿರಣಿ ಕಾರ್ಖಾನೆಯನ್ನು ನಡೆಸುತ್ತಾನೆ. ಲಾಕ್ಡೌನ್ ಹಿನ್ನೆಲೆಯಲ್ಲಿ ನಷ್ಟದಲ್ಲಿತ್ತು. ಕಳೆದ ಕೆಲ ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟಲಾಗಲಿಲ್ಲ. 80 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿಯಿದೆಯಂತೆ. ಅದೇ ಕಾರಣಕ್ಕೆ ವಿದ್ಯುತ್ ನಿಗಮದ ಅಧಿಕಾರಿಗಳು ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುನೇಂದ್ರಗೆ ಅವಮಾನಿಸಿದ್ದಾರಂತೆ. ಇದರಿಂದ ಮನನೊಂದ ಆತ ತನ್ನ ಕಾರ್ಖಾನೆಯ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಪ್ರಧಾನಿ ಮೋದಿಯವರೇ ನನಗೆ ನಿಮ್ಮ ಬಗ್ಗೆ ಗೌರವವಿದೆ. ನಿಮ್ಮ ಸರ್ಕಾರ ಅದ್ಭುತ ಕೆಲಸಗಳನ್ನು ಮಾಡಿದೆ. ಆದರೆ ಕೆಳ ಮಟ್ಟದಲ್ಲಿರುವ ಅಧಿಕಾರಿಗಳು ಬಡವರ ಬದುಕನ್ನು ಇನ್ನಷ್ಟು ಬರಡು ಮಾಡುತ್ತಿದ್ದಾರೆ. ವಿದ್ಯುತ್ ನಿಗಮದ ಅಧಿಕಾರಿಗಳ ಟಾರ್ಚರ್ನಿಂದಾಗೇ ನಾನಿಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.
ನನ್ನ ಮೃತ ದೇಹವನ್ನು ನಿಗಮದ ಅಧಿಕಾರಿಗಳಿಗೆ ಕೊಡಿ. ಬಳಕೆಗೆ ಬರುವ ಅಂಗಾಂಗಳನ್ನು ಮಾರಿಕೊಂಡು ಅವರು ವಿದ್ಯುತ್ ಬಿಲ್ ತುಂಬಿಸಿಕೊಳ್ಳಲಿ ಎಂದು ಹೇಳಿಕೊಂಡಿದ್ದಾನೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.