ಮುಂಬೈ: ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ಸೋಂಕಿನ ಲಕ್ಷಣಗಳು ಇರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಸಚಿನ್ ತೆಂಡೂಲ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಇಂದು ಕೊರೊನಾ ಲಕ್ಷಣಗಳು ಕಂಡುಬಂದಿದ್ದು, ಕುಟುಂಬದವರ ವರದಿ ನೆಗೆಟಿವ್ ಬಂದಿದೆ. ಸದ್ಯಕ್ಕೆ ನಾನು ನನ್ನ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಮನವಿ ಮಾಡಿದ್ದಾರೆ.
ಒಂದು ವಾರದ ಹಿಂದೆ ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ-20 ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ, ಭಾರತದ ಮಾಜಿ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ಯೂಸೂಫ್ ಪಠಾಣ್, ಮೊಹಮ್ಮದ್ ಕೈಫ್, ವಿನಯ್ ಕುಮಾರ್ ಮೊದಲಾದ ಆಟಗಾರರು ಪಾಲ್ಗೊಂಡು ಸಂಪರ್ಕಿತರಾಗಿದ್ದರು.



