ಹೈದರಾಬಾದ್: ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಗೌರವ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್‌ಮೋಹನ ರೆಡ್ಡಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಗನ್ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನಮ್ಮ ರಾಜ್ಯದ ನೆಲ್ಲೂರು ಜಿಲ್ಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಹುಟ್ಟೂರಾಗಿರುವುದು ನಮ್ಮ ಪುಣ್ಯ. ಅವರ ಅಗಲಿಕೆಯಿಂದ ರಾಜ್ಯಕ್ಕೆ, ದೇಶಕ್ಕೆ ಮಾತ್ರ ನಷ್ಟವಾಗಿಲ್ಲ, ಬದಲಾಗಿ ಅಂತಾರಾಷ್ಟ್ರೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿ ಅವರು 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಆರು ಬಾರಿ ಅವರು ರಾಷ್ಟ್ರ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಾಯನ ಕ್ಷೇತ್ರದ ಲತಾ ಮಂಗೇಶ್ಕರ್, ಭೂಪೇನ್ ಹಝಾರಿಕಾ, ಎಂ.ಎಸ್ ಸುಬ್ಬಲಕ್ಷ್ಮೀ, ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಶಿ ಅವರಿಗೆ ಈ ಹಿಂದೆ ಭಾರತ ರತ್ನ ನೀಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡುವ ಮೂಲಕ ಅವರಿಗೆ ಗೌರವ ಸಮರ್ಪಿಸಬೇಕು ಒತ್ತಾಯಿಸಿದ್ದಾರೆ.



