ಹೈದರಾಬಾದ್: ತಮಿಳು ನಾಡಿನ ಮಾಜಿ ರಾಜ್ಯಪಾಲ ಮತ್ತು ಹಿಂದಿನ ಏಕೀಕೃತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ (K Rosaiah) ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. 88 ವರ್ಷದ ರೋಸಯ್ಯ ಅನಾರೋಗ್ಯದಿಂದ ಬಳಲುತ್ತಿದ್ದರು.
ರೋಸಯ್ಯ ಅವರನ್ನು ಇಂದು ನಸುಕಿನ ಜಾವ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಹೈದರಾಬಾದ್ ನಲ್ಲಿ ನೆರವೇರಲಿದೆ.ರೋಸಯ್ಯ ಅವರ ನಿಧನಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಾದ ರೋಸಯ್ಯ ಅವರು, ಕೆ. ವಿಜಯ ಭಾಸ್ಕರ್ ರೆಡ್ಡಿ, ವೈ ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು. ಹಣಕಾಸು ಸಚಿವರಾಗಿ ಅವರು ಸದನದಲ್ಲಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದರು.2009ರಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಹಠಾತ್ ನಿಧನ ನಂತರ ಹಣಕಾಸು ಸಚಿವರಾಗಿದ್ದ ರೋಸಯ್ಯ ಅವರು ಮುಖ್ಯಮಂತ್ರಿಯಾದರು. ನಂತರ ತಮಿಳು ನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.