ಸಿಧಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕಾಲುವೆಗೆ ಬಸ್ ಉರುಳಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು, ಇಂದು ಕೂಡ 4 ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಧಿ ಜಿಲ್ಲೆಯ ಪಟ್ನಾ ಗ್ರಾಮದ ಬಳಿ ಮಂಗಳವಾರ ಬಸ್‌ವೊಂದು ಸೇತುವೆಗೆ ಡಿಕ್ಕಿಯಾಗಿ ಕಾಲುವೆಗೆ ಉರುಳಿ ಬಿದ್ದಿತ್ತು. ಬಸ್‌ನಲ್ಲಿದ್ದವರ ಪೈಕಿ 20 ಮಹಿಳೆಯರು ಸೇರಿ 47 ಪ್ರಯಾಣಿಕರ ಶವಗಳು ನಿನ್ನೆ ಪತ್ತೆಯಾಗಿದ್ದವು. ಒಟ್ಟು 57 ಮಂದಿ ಪ್ರಯಾಣಿಕರಲ್ಲಿ 51 ಮಂದಿ ಮೃತಪಟ್ಟಿದ್ದಾರೆ.
ನಿನ್ನೆ ಸ್ಥಗಿತಗೊಳಿಸಲಾದ ರಕ್ಷಣಾ ಕಾರ್ಯಾಚರಣೆ ಇಂದು ಬೆಳಿಗ್ಗೆ ಪುನರಾರಂಭಗೊಂಡಿತ್ತು. ಬನ್ಸಾಗರ್ ಅಣೆಕಟ್ಟು ಯೋಜನೆಯ ಭಾಗವಾಗಿರುವ ಕಾಲುವೆಯಲ್ಲಿ ಎರಡು ಮೃತದೇಹಗಳು ಸಿಕ್ಕಿವೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜುಲತ ಪಟ್ಲೆ ಹೇಳಿದರು.
‘ಈವರೆಗೆ 51 ಶವಗಳು ಪತ್ತೆಯಾಗಿವೆ. ಸಿಧಿ ಮತ್ತು ರೇವಾದ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ 3 ಮಂದಿ ನಾಪತ್ತೆಯಾಗಿರುವ ಶಂಕೆಯಿದೆ’ ಎಂದು ಅವರು ತಿಳಿಸಿದರು.
‘ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಐದು ಜಿಲ್ಲೆಗಳ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಒಟ್ಟು 600 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ’ ಎಂದು ಅಧಿಕಾರಿಳು ತಿಳಿಸಿದ್ದಾರೆ.



