ದಾವಣಗೆರೆ: ಉತ್ತರ ಕರ್ನಾಟಕದ ಅನ್ನದಾತರಿಗೆ ವಕ್ಫ್ ಬೋರ್ಡ್, ತಮ್ಮ ಆಸ್ತಿ ಎಂದು ನೋಟಿಸ್ ನೀಡಿ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ವಿವಿಧ ಜಿಲ್ಲೆಯ ಅನ್ನದಾತರೆಲ್ಲ ತಮ್ಮ ಜಮೀನಿನ ಪಹಣಿ ತೆಗೆಸಿಕೊಂಡು ಹಕ್ಕು, ಋಣ ಕಾಲಂ ಪರಿಶೀಲನೆ ಮಾಡಲು ಮುಗಿಬಿದ್ದಿದ್ದಾರೆ.
ವಿಜಯಪುರ, ಬೀದರ್ , ಬಾಗಲಕೋಟೆ, ಕಲಬುರಗಿ ಸೇರಿ ಇತರೆ ಜಿಲ್ಲೆಯ ರೈತರ ಪಿತ್ರಾರ್ಜಿತ ಆಸ್ತಿಯ ಪಹಣಿಯಲ್ಲಿಯೂ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂದು ಹಕ್ಕು, ಋಣ ಕಾಲಂ ನಲ್ಲಿ ನಮೂದು ಮಾಡಿದ್ದು, ರಾಜ್ಯದ ಇತರೆ ಜಿಲ್ಲೆಯ ರೈತರಲ್ಲಿ ಆತಂಕ ಉಂಟು ಮಾಡುವಂತೆ ಮಾಡಿದೆ. ಹೀಗಾಗಿ ರೈತರು ತಮ್ಮ ಜಮೀನಿನ ಪಹಣಿ ತೆಗೆಸಿಕೊಂಡು ಪರಿಶೀಲನೆಗೆ ನಡೆಸಲು ಮುಗಿಬಿದ್ದಿದ್ದಾರೆ. ಕೂಡಲೇ ರೈತರು ತಮ್ಮ ಜಮೀನ ಅಪ್ಡೇಟ್ ಪಹಣಿ ತೆಗೆಸಿ ನಿಮ್ಮ ಜಮೀನನಲ್ಲಿಯೂ ಯಾರಾದ್ರೂ ಹಕ್ಕು, ಋಣ ಹೊಂದಿದ್ದರಾ..? ಎಂಬುದನ್ನು ಪರಿಶೀಲಿಸಿಕೊಳ್ಳಬೇಕಿದೆ.
ವಿಜಯಪುರ ಜಿಲ್ಲೆಯಲ್ಲಿ 124ಕ್ಕೂ ಅಧಿಕ ರೈತರ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್‌ಗೆ ಸೇರಿರುವ ಆಸ್ತಿ ಎಂದು ನಮೂದಾಗಿರುವ ವಿಷಯ ತಿಳಿಯು ತ್ತಿದ್ದಂತೆ ರಾಜ್ಯದ ಇತರ ಜಿಲ್ಲೆಗಳ ಅನ್ನ ದಾತರಲ್ಲೂ ಆತಂಕ ಉಂಟಾಗಿದೆ. ಬೀದರ್ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಲಾಗಿದೆ.
ಗ್ರಾಮ ಒನ್, ತಹಶೀಲ್ದಾರ್ ಕಚೇರಿ, ನೋಂದಣಿ ಕಚೇರಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ತಮ್ಮ ಪಹಣಿಯಲ್ಲೂ ಇಂತಹ ಅವಾಂತರವಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ರೈತರಿಗೆ ಹೊಲವೇ ದೊಡ್ಡ ಆಸ್ತಿ. ಈಗ ಇದ್ದಕ್ಕಿದ್ದಂತೆ ಪಿತ್ರಾರ್ಜಿತ ಆಸ್ತಿಗಳು ಅನ್ಯಧರ್ಮದ ಬೋರ್ಡ್ ಗೆ ಪಾಲಾಗುತ್ತದೆ ಎನ್ನುವ ಆತಂಕ ರೈತರಲ್ಲಿ ಆರಂಭವಾಗಿದೆ.
ಪಹಣಿಯಿಂದ ಈ ವಕ್ಫ್ ಬೋರ್ಡ್ ಹೆಸರು ತೆಗೆಸುವುದು ಹೇಗೆ..?: ರೈತರು ತಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅದರ ಅಧಿಕೃತ ದಾಖಲೆಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಈಗಾಗಲೇ ವಕ್ಫ್ ಬೋರ್ಡ್ ಜತೆಗೆ ಕಾನೂನು ಹೋರಾಟ ಮಾಡಿ ಗೆದ್ದಿದ್ದರೆ, ಅದರ ದಾಖಲೆಗಳ ಸಮೇತ ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು. ವಕ್ಫ್ ಬೋರ್ಡ್ ನಿಂದಲೇ ಇದು ನಮ್ಮ ಆಸ್ತಿಯಲ್ಲ ಎಂಬುದನ್ನು ಅಧಿಕೃತ ರುಜುವಾತು ಪತ್ರ ಇದ್ದರೆ ಅದನ್ನು ಕಂದಾಯ ಇಲಾಖೆಗೆ ಹಾಜರು ಮಾಡಬೇಕು. ಆಗ ಮಾತ್ರ ಈ ವಕ್ಫ್ ಆತಂಕದಿಂದ ರೈತರು ಹೊರಗೆ ಬರಲು ಸಾಧ್ಯ.