ಬೆಂಗಳೂರು: ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಮಡಿವಾಳ ಸಮುದಾಯದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ, ಮಡಿವಾಳ ಮತ್ತು ಹಿಂದುಳಿದ ಸಮುದಾಯದ ಮಕ್ಕಳು ಶಿಕ್ಷಣವಂತರಾಗಬೇಕು. ಇದಕ್ಕಾಗಿ ವಿದ್ಯಾಸಿರಿ ಮೊತ್ತವನ್ನು ಪ್ರತಿ ವಿದ್ಯಾರ್ಥಿಗೆ ಒಂದೂವರೆ ಸಾವಿರದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಸಮುದಾಯ ಭವನ ಉದ್ಘಾಟನೆ ತಿಳಿಸಿದರು.
12ನೇ ಶತಮಾನದಲ್ಲೇ ಮಡಿವಾಳ ಮಾಚಿ ದೇವರು ಬಸವಣ್ಣನವರ ಜೊತೆ ಸೇರಿ ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನತೆ ಇದೆ. ಇದರಿಂದ ಕೆಲ ಸಮುದಾಯಗಳು ಉದ್ಯೋಗ, ಶಿಕ್ಷಣ ಸಿಗದೆ ಆರ್ಥಿಕ ಅಸಮಾನತೆ ಹೆಚ್ಚಿ ಅಸಮಾನತೆ ಹೆಚ್ಚಾಯಿತು ಎಂದರು.
ಬಸವಾದಿ ಶರಣರು ಜಾತಿಮುಕ್ತ ಮನುಷ್ಯ ಸಮಾಜ ನಿರ್ಮಾಣಕ್ಕೆ ಹೋರಾಡಿದ್ದರು. ಒಟ್ಟಿಗೆ ಕುಳಿತು ಊಟ ಮಾಡಲಾಗದ ಅನಿಷ್ಠ ಪದ್ಧತಿ ವಿರುದ್ಧ ಧ್ವನಿ ಎತ್ತಿ ಜಾತಿ ಅಸಮಾನತೆ ಅಳಿಸಲು ಹೋರಾಡಿದ್ದನ್ನು ವಿವರಿಸಿದರು. ಎಲ್ಲಾ ಜಾತಿ, ಸಮುದಾಯಗಳ ಜಾತ್ಯತೀತ ಪ್ರತಿನಿಧಿಗಳನ್ನೊಳಗೊಂಡ ಅನುಭವ ಮಂಟಪದ ಉದ್ದೇಶವೇ ಜಾತಿ ಮುಕ್ತ ಸಮಾಜದ ನಿರ್ಮಾಣವಾಗಿತ್ತು ಎಂದರು.
ಮಡಿವಾಳ ಸಮುದಾಯದ ಸೇರಿ ಹಿಂದುಳಿದ ಸಮುದಾಯದ ಮಕ್ಕಳು ಹೆಚ್ಚೆಚ್ಚು ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ವಿದ್ಯಾಸಿರಿ ಯೋಜನೆ ಜಾರಿಗೆ ತಂದೆವು. ಈಗ ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಎರಡು ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.