ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ಸೇರಿದಂತೆ ಒಟ್ಟಾರೆ 19 ಸಾವಿರ ಶಿಕ್ಷಕರ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರಕಾರ ಅಧಿಕಾರ ವಹಿಸಿಕೊಂಡ ನಂತರ 13,500 ಶಿಕ್ಷಕರ ನೇಮಿಸಿದೆ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅಧ್ಯಯನ ಸಂಬಂಧ ರಚಿಸಿರುವ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಸಲ್ಲಿಸಿದ ಬಳಿಕ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪೂರ್ವ ಪ್ರಾಥಮಿಕ ಶಿಕ್ಷಣ
ರಾಜ್ಯದಲ್ಲಿ 5 ಸಾವಿರ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಗುರಿ ಹೊಂದಿದ್ದೇವೆ. ಇದಲ್ಲದೆ ಕೆಪಿಎಸ್ ಶಾಲೆಗಳನ್ನು ಆರಂಭಿಸುತ್ತೇವೆ. ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡುತ್ತಿದ್ದು, ಓದು ಕರ್ನಾಟಕ, ಕಲಿಕಾ ದೀಪ, ಗಣಕ ಗಣಿತ, ಕಲಿಕಾ ಚಿಲುಮೆ ಕಾರ್ಯಕ್ರಮಗಳನ್ನು ಜಾರಿ ತರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹತ್ತನೇ ತರಗತಿಯಲ್ಲಿ ಆನ್‍ಲೈನ್ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸ್ಟುಡಿಯೋಗಳಲ್ಲಿ ಚಿತ್ರಿಕರಣ ನಡೆಸಿ, ಆ ಪಠ್ಯಗಳನ್ನು ಶಾಲೆಗಳಲ್ಲಿ ಭಿತ್ತರಿಸಲಾಗುವುದು ಎಂದು ತಿಳಿಸಿದರು.



