ಬೆಂಗಳೂರು: ಇ-ಖಾತಾ ಗೊಂದಲ ಮಧ್ಯೆಯೇ ರಾಜ್ಯಾದ್ಯಂತ ಏಕಾಏಕಿ ಸೋಮವಾರದಿಂದ (ಅ.21) ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಎಲ್ಲ ರೀತಿಯ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ. ನೋಂದಣಿ ಕಾಯಿದೆ-1908ಗೆ ತಿದ್ದುಪಡಿ ಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬರುವವರೆಗೂ ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳ್ಳಲಿದೆ.
ಕೇಂದ್ರದ ನೋಂದಣಿ ಕಾಯಿದೆ-1908ಗೆ ತಿದ್ದುಪಡಿ ತಂದ ರಾಜ್ಯ ಸರ್ಕಾರ, ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ -2023ಕ್ಕೆ ರಾಷ್ಟ್ರಪತಿಗಳು ಅ.8 ರಂದು ಅಂಕಿತ ಹಾಕಿದ್ದರು. ಸರ್ಕಾರ ಅ.19 ರಂದು ಅಧಿಕೃತ ರಾಜ್ಯ ಪತ್ರದಲ್ಲಿ ಕಾಯ್ದೆ ಜಾರಿ ಬಗ್ಗೆ ಪ್ರಕಟಿಸಿತ್ತು. ಹೊಸ ನೋಂದಣಿ ತಿದ್ದುಪಡಿ ಕಾಯ್ದೆಯಲ್ಲಿ ನಕಲಿ ದಾಖಲೆ ಆಧರಿಸಿದ ನೋಂದಣಿಗೆ ಕಡಿವಾಣ ಹಾಕಲಾಗಿದೆ. ನಕಲಿ ದಸ್ತಾವೇಜು ಆಧರಿಸಿದ ನೋಂದಣಿ ಮಾಡಿದರೆ ಸಬ್ ರಿಜಿಸ್ಟ್ರಾರ್ ಗಳಿಗೆ ಮೂರು ವರ್ಷ ಶಿಕ್ಷೆ ವಿಧಿಸಲಾಗುವುದು. ಇದಕ್ಕೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದು ಸರ್ಕಾರದಿಂದ ಸ್ಪಷ್ಟನೆ ನಿರೀಕ್ಷಿಸಿ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ರಿಜಿಸ್ಟ್ರೇಷನ್ ಕಾಯಿದೆ 1908ರಲ್ಲಿ 22B ಹೊಸ ಸೆಕ್ಷನ್ ಪರಿಚಯಿಸುವುದರಿಂದ ಕೇಂದ್ರ ಕಛೇರಿಯಿಂದ ಸರಿಯಾದ ನಿರ್ದೇಶನಗಳು ಬರುವವರೆಗೂ ದಸ್ತಾವೇಜುಗಳ ಪರಿಶೀಲನೆ, ನೋಂದಣಿಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡುತ್ತಿದ್ದೇವೆ ಎಂದು ತಿಳಿಸಲಾಗಿದೆ.



