ಬೆಂಗಳೂರು: ಗಣಿ ಮತ್ತು ಕ್ರಷರ್ ಉದ್ಯಮವನ್ನು ಪುನಾರಂಭಿಸುವ ನಿಟ್ಟಿನಲ್ಲಿ 90 ದಿನದೊಳಗೆ ಗಣಿ ಸುರಕ್ಷತಾ ಮಹಾನಿರ್ದೇಶಕರು ಲೈಸೆನ್ಸ್ ನೀಡಲು ನೂತನ ನಿಯಮ ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ಬಳಿಕ ರಾಜ್ಯದಲ್ಲಿ ಗಣಿ ಮತ್ತು ಕ್ರಷರ್ ಉದ್ಯಮ ಸಂಪೂರ್ಣವಾಗಿ ಕುಸಿತವಾಗಿದೆ. ಈ ಉದ್ಯಮವನ್ನು ಪುನಾರಂಭಿಸಬೇಕಾದರೆ ಸ್ಫೋಟಕಗಳನ್ನು ಬಳಸುವುದು ಅನಿವಾರ್ಯ. ಈಗಿರುವ ನಿಯಮವನ್ನು ಮುಂದುವರೆಸಿದರೆ ಉದ್ಯಮವನ್ನು ನಡೆಸುವುದೇ ಕಷ್ಟಕರ. ಈ ಹಿನ್ನೆಲೆಯಲ್ಲಿ ಮಾಲೀಕರು ಸ್ಫೋಟಕಗಳನ್ನು ಬಳಸಲು ಅರ್ಜಿ ಸಲ್ಲಿಸಿದರೆ ಗಣಿ ಸುರಕ್ಷತಾ ಮಹಾನಿರ್ದೇಶಕರು 90 ದಿನದೊಳಗೆ ಪರಾವನಗಿ ನೀಡುವಂತೆ ನಿಯಮವನ್ನು ಜಾರಿ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಸರಿಸುಮಾರು ಎರಡೂವರೆ ಸಾವಿರ ಗಣಿ ಮತ್ತು ಕ್ರಷರ್ ಕ್ವಾರಿಗಳಿವೆ. ಶೇ.10ರಷ್ಟು ಮಾತ್ರ ಲೈಸೆನ್ಸ್ ಪಡೆಯಲಾಗಿದೆ. ಉಳಿದ ಶೇ.90ರಷ್ಟು ಲೈಸೆನ್ಸ್ ಪಡೆಯಲು ಸಾಧ್ಯವಾಗಿಲ್ಲ. ಹಾಲಿ ಇರುವ ನಿಯಮದಿಂದ ಉದ್ಯಮ ನಡೆಸಲು ಕಷ್ಟವಾಗುತ್ತದೆ. 90 ದಿನದೊಳಗೆ ಲೈಸೆನ್ಸ್ ಪಡೆಯುವುದಾಗಿ ಗಣಿ ಸುರಕ್ಷತಾ ಮಹಾನಿರ್ದೇಶಕರಿಗೆ ಮುಚ್ಚಳಿಕೆ ಬರೆದುಕೊಡಬೇಕು. ಲೈಸೆನ್ಸ್ ಪಡೆದಿರುವ ಮಾಲೀಕರ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಸೂಚಿಸಿದರು.
ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಅನುಕೂಲವಾಗುವಂತೆ ಗಣಿ ಅದಾಲತ್‍ಗಳನ್ನು ನಡೆಸಲಾಗುವುದು. ಮೇ 17ರಿಂದ ಇದು ಆರಂಭವಾಗಲಿದೆ ಎಂದರು.ಮೈಸೂರು, ಮಂಗಳೂರು, ಗುಲ್ಬರ್ಗದಲ್ಲೂ ಗಣಿ ಅದಾಲತ್‍ಗಳನ್ನು ನಡೆಸಲಾಗುವುದು. ಇದರಿಂದ ಗಣಿ ಮಾಲೀಕರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಉದ್ಯಮವು ಕೂಡ ಸುಲಲಿತವಾಗಿ ನಡೆಯಲಿದೆ ಎಂದರು.



