ಶಿವಮೊಗ್ಗ: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಪ್ರತಿಭಟನೆ ನಿಲ್ಲಿಸಲು ಹಣ ಪಡೆದ ಆರೋಪ ಎದುರಿಸುತ್ತಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಂಘದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಎಚ್.ಆರ್. ಬಸವರಾಜಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯ ರೈತ ಸಂಘ ಶಿವಮೊಗ್ಗದಲ್ಲಿ ಮಹತ್ವದ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ 18 ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು, ರಾಜ್ಯ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸಲು ನಿರ್ಧರಿಸಲಾಯಿತು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ , ಖಾಸಗಿ ಸುದ್ದಿ ವಾಹಿನಿಯೊಂದು ಸ್ಟಿಂಗ್ ಆಪರೇಷನ್ ಮಾಡಿ, ಕೋಡಿಹಳ್ಳಿ ಚಂದ್ರಶೇಖರ್ ಹಣವನ್ನು ಪಡೆದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಪ್ರತಿಭಟನೆಯನ್ನು ಕೈಬಿಟ್ಟಿದ್ದರು ಎಂಬ ಸುದ್ದಿ ಬಿತ್ತರಿಸಿತ್ತು. ಆದರೆ ಇದನ್ನು ಕೋಡಿಹಳ್ಳಿ ಅಲ್ಲಗಳೆಯಲಿಲ್ಲ. ಆರೋಪದ ಕುರಿತು ಸ್ಪಷ್ಟನೆ ನೀಡಲಿಲ್ಲ. ಇದರಿಂದಾಗಿ ಸಂಘ ಗೌರವಕ್ಕೂ ಹಾಳಾಗುತ್ತಿರುವುದನ್ನು ಗಮನಿಸಿ ಪದಾಧಿಕಾರಿಗಳು ರಾಜ್ಯ ಸಮಿತಿಯ ಸಭೆಯನ್ನು ಮಾಡಿ ಕೋಡಿಹಳ್ಳಿ ಚಂದ್ರಶೇಖರ್ರನ್ನು ವಜಾಗೊಳಿಸಿರುವುದಾಗಿ ಹೇಳಲಾಗಿದೆ.
ಇನ್ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಹೊರಗಿಟ್ಟು ಸಂಘಟನೆ ಬಲಪಡಿಸುತ್ತೇವೆ. ಎಲ್ಲಾ ರೈತ ಸಂಘಗಳು ಒಂದಾಗಿ ಮಾತುಕತೆಗೆ ಬಂದಲ್ಲಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸುತ್ತೇನೆ. ಇದೊಂದು ವಿಶೇಷ ಸಂದರ್ಭ. 1980 ರಲ್ಲಿ ರೈತ ಚಳವಳಿ ಆರಂಭವಾಯ್ತು. 1972 ರಲ್ಲೇ ಶಿವಮೊಗ್ಗದಲ್ಲಿ ರೈತ ಸಂಘ, ಮೂಡಿಗೆರೆಯಲ್ಲಿ ಕಬ್ಬು ಬೆಳೆಗಾರರ ಸಮಾವೇಶವನ್ನು ಪ್ರೊ. ನಂಜುಡಸ್ವಾಮಿ ಮಾಡಿದ್ದರು. ಶಿವಮೊಗ್ಗ ಜಿಲ್ಲೆಗೆ ರೈತ ಸಂಘದ 50 ವರ್ಷ ಚಳವಳಿ ಹಿನ್ನಲೆ ಇದೆ ಎಂದರು.
ಈ ವಿಚಾರವಾಗಿ ನಾವೆಲ್ಲರು ತಲೆ ತಗ್ಗಿಸುವಂತಾಗಿದೆ. ಇದು ರೈತ ಚಳವಳಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಈಗಿನ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತನಿಖೆ ಆಗುವವರೆಗಾದರೂ ರಾಜೀನಾಮೆ ಕೊಟ್ಟು ಸಂಘದ ಗೌರವವನ್ನು ಉಳಿಸಬೇಕಿತ್ತು. ಈ ದಿನ ಸಭೆ ಸೇರಿದ ಎಲ್ಲರೂ ಸ್ಥಾನ ತ್ಯಜಿಸಿ ಬೇರೆಯವರನ್ನು ಆಯ್ಕೆ ಮಾಡಿ ಎಂದು ಸಲಹೆಯನ್ನು ನೀಡಿದರು ಒಪ್ಪಲಿಲ್ಲ. ಈ ಕಾರಣದಿಂದಾಗಿ ಶಿವಮೊಗ್ಗದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಗೊಳಿಸಲಾಗಿದೆ ಎಂದರು.