ಬೆಂಗಳೂರು: ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಘೋಷಣೆ ಹಿನ್ನೆಲೆ ಕರ್ನಾಟಕದ ಸರ್ಕಾರಿ ನೌಕರರು ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಮತ್ತೊಂದೆಡೆ ಮಾರ್ಚ್ 15ಕ್ಕೆ ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗದ ಅವಧಿ ಮುಕ್ತಾಯಗೊಳ್ಳುತ್ತದೆ. ಸರ್ಕಾರ ವರದಿ ಸ್ವೀಕರಿಸಿ ಜಾರಿ ಮಾಡುತ್ತಾ..? ಸರ್ಕಾರ ಆದೇಶಕ್ಕೆ ರಾಜ್ಯ ಸರ್ಕಾರಿ ನೌಕರರು ಕಾಯುತ್ತಿದ್ದಾರೆ.
ಲೋಕಸಭೆ ಚುನಾವಣೆ 2024ರ ನೀತಿ ಸಂಹಿತೆ ಜಾರಿಗೂ ಮೊದಲೇ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಕುರಿತು ಸರ್ಕಾರ ಆದೇಶ ಹೊರಡಿಸಲಿದೆಯೇ? ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಕರ್ನಾಟಕ ಸರ್ಕಾರಿ ನೌಕರರ ಸಂಘ ಇಂದು(ಮಾ.12) ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿಗೆ ಪತ್ರವನ್ನು ಬರೆದಿದೆ.
ಮಾ.15ರೊಳಗೆ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ ಇದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ್ರೆ ಹೊಸ ಘೋಷಣೆ ಮಾಡುವುದು ಕಷ್ಟ. ಕರ್ನಾಟಕದ ಸರ್ಕಾರಿ ನೌಕರರು ಸರ್ಕಾರದ ಮುಂದೆ 2 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಒಂದು 7ವೇ ವೇತನ ಆಯೋಗದ ವರದಿಯನ್ನು ಪಡೆದು ಅದನ್ನು ಅನುಷ್ಠಾನಗೊಳಿಸುವ ಕುರಿತು ಆದೇಶ ಹೊರಡಿಸುವುದು ಮತ್ತೊಂದು ತುಟ್ಟಿಭತ್ಯೆ ಹೆಚ್ಚಳ.ಮಾರ್ಚ್ 15ಕ್ಕೆ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗದ ಅವಧಿ ಮುಕ್ತಾಯಗೊಳ್ಳುತ್ತದೆ. ಈ ಕಾರಣಕ್ಕೆ ಎರಡು ಬೇಡಿಕೆಯನ್ನು ಸರ್ಕಾರ ಪೂರೈಸುತ್ತಾ ಎಂಬುದು ಸದ್ಯ ಕಾದು ನೋಡಬೇಕಿದೆ.
ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರವು ಡಿಎ ಹೆಚ್ಚಳ ಮಾಡುತ್ತದೆ. ಕೇಂದ್ರ ಸರ್ಕಾರ 2024ರ ಜನವರಿ 1ರಿಂದ ಅನ್ವಯವಾಗುವಂತೆ ಡಿಎ ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಎರಡು ತಿಂಗಳ ಹಿಂಬಾಕಿಯೊಂದಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿತ್ತು. ಈ ಮೂಲಕ ಲೋಕಸಭೆ ಚುನಾವಣೆ ಎದುರಾಗಿರುವಾಗ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿತ್ತು. ರಾಜ್ಯ ಸರ್ಕಾರವೂ ರಾಜ್ಯ ಸರ್ಕಾರ ನೌಕರರಿಗೆ ತುಟ್ಟಿ ಭತ್ಯೆ ಅಥವಾ 7 ನೇ ವೇತನ ಆಯೋಗ ಜಾರಿ ಮಾಡಿ ಬಂಪರ್ ಕೊಡುಗೆ ನೀಡುತ್ತಾ ಎಂಬುದು ನೌಕರರ ಕುತೂಹಲಕ್ಕೆ ಕಾರಣವಾಗಿದೆ.